Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ:
ದೇಶಗಳ ನಡುವಿನ ಗಡಿಗಳನ್ನು ನಾವಾಗಿಯೇ ನಿರ್ಮಿಸಿಕೊಂಡದ್ದು. ಈ ಗಡಿಗಳು ಮಾನಸಿಕವಾಗಿ ನಮ್ಮನ್ನು ಕಟ್ಟಿಹಾಕಿವೆ. ಇದರ ಉಳಿವಿಗಾಗಿ ಇತಿಹಾಸಕಾಲದಿಂದಲೂ ಯುದ್ಧ ಮಾಡುತ್ತ ಬಂದಿದ್ದೇವೆ. ಯುದ್ಧ ಹಿಂಸೆ ಮಾನವನ ಇತಿಹಾಸದ ಬೆಳವಣಿಗೆಯಲ್ಲಿ ಒಂದು ಅಂಗವಾಗಿಯೇ ಬೆಳೆದು ಬಂದಿದೆ. ಆದ್ದರಿಂದಲೇ ಇವು ಮಾನಸಿಕ ಯುದ್ಧಗಳಾಗಿ ಪರಿವರ್ತನೆಗೊಂಡಿವೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಹೇಳಿದರು.

ಆಳ್ವಾಸ್ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ‘ಪ್ರಸ್ತುತ ಜಗತ್ತಿನಲ್ಲಿ ಯುದ್ಧಗಳಿಲ್ಲದ ಅಹಿಂಸಾತ್ಮಕ ಪರಿಕಲ್ಪನೆಯನ್ನು ಹೆಚ್ಚು ಪ್ರಚುರಪಡಿಸಬೇಕು’ಎಂದರು.

ಈ ಸಂದರ್ಭ ಮಾಜಿ ಸೈನಿಕ, ಹವಾಲ್ದಾರ್ ಉದಯ್ ಹಾಗೂ ಮಾಜಿ ಸೈನಿಕ ಹವಾಲ್ದಾರ್ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹವಾಲ್ದಾರ್ ಉದಯ್, ಆಳ್ವಾಸ್ ಕಾಲೇಜು ಕೇವಲ ಒಂದು ಶಿಕ್ಷಣ ಸಂಸ್ಥೆಯಾಗದೆ, ಕ್ರೀಡೆ ಮತ್ತು ಸೇನಾ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಸೈನ್ಯದಲ್ಲಿ ಒಗ್ಗಟ್ಟು ಇದ್ದರೆ ಏನನ್ನೂ ಸಾಧಿಸಲು ಸಾಧ್ಯ ಎಂದು ಹೇಳಿದರು.

ಬಳಿಕ ಮಾತನಾಡಿದ ಹವಾಲ್ದಾರ್ ಹರೀಶ್, ತಮ್ಮ ಮನೆ, ಮಠ, ಊಟ, ನೀರು, ನಿದ್ರೆ ಬಿಟ್ಟು ಸೈನಿಕರು ದೇಶ ಸೇವೆಗೆ ಮುಂದಾಗುತ್ತಾರೆ. ಕೊರೆಯುವ ಹಿಮಪಾತಗಳ ನಡುವೆ ತಮ್ಮ ವೈಯುಕ್ತಿಕ ಕಷ್ಟ, ಸುಖ ದು:ಖಗಳನ್ನು ಬದಿಗಿರಿಸಿ, ದೇಶಕ್ಕಾಗಿ ಹೋರಾಡುತ್ತಾರೆ. ಎಷ್ಟೋ ವೀರರ ಬಲಿದಾನದಿಂದ ಇಂದು ವಿಜಯೀ ದಿವಸ್ ಅನ್ನು ಆಚರಿಸುತ್ತಿದ್ದೇವೆ. ಕಷ್ಟಪಟ್ಟರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಡಾ. ಬಾಲಕೃಷ್ಣ ಶೆಟ್ಟಿ, ಸೇನಾ ಘಟಕದ ಕ್ಯಾಪ್ಟನ್ ಡಾ.ರಾಜೇಶ್, ನೌಕಾದಳದ ಸಬ್ ಲೆಫ್ಟಿನೆಂಟ್ ನಾಗರಾಜ, ವಾಯುದಳದ ಫ್ಲೈಯಿಂಗ್ ಆಫಿಸರ್ ಪರ್ವಿಜ್ ಶರೀಫ್ ಉಪಸ್ಥಿತರಿದ್ದರು. ಕಾರ್ಯಕ್ರಮನ್ನು ಸೇನಾ ಘಟಕದ ಜೂನಿಯರ್ ಅಂಡರ್ ಆಫೀಸರ್ ವೆಷ್ಣವಿ ಚೌಹಾಣ್ ನಿರೂಪಿಸಿದರು.

Exit mobile version