ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಫೈನಾನ್ಸಿನ ವ್ಯವಹಾರದಲ್ಲಿನ ಒಡಕಿನಿಂದಾಗಿ ತನ್ನ ವ್ಯವಹಾರದ ಪಾಲುದಾರ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದಾಗಿ ಅನೂಪ್ ಶೆಟ್ಟಿ ಒಪ್ಪಿಕೊಂಡಿದ್ದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಕರಣ ಮಾಹಿತಿ ನೀಡಿ , ಆರೋಪಿ ಅನೂಪ್ ಶೆಟ್ಟಿ ಈ ಮೊದಲು ದುಬಾಯಿ ಮತ್ತು ಸಿಂಗಾಪೂರದಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಊರಿಗೆ ಮರಳಿ ಅಜೇಂದ್ರ ಶೆಟ್ಟಿಯೊಂದಿಗೆ ಸೇರಿಕೊಂಡು ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಫೈನಾನ್ಸ್ ವ್ಯವಹಾರದಲ್ಲಿ ಇಬ್ಬರಿಗೂ ಆಗಿಂದಾಗ್ಗೆ ಗಲಾಟೆಗಳು ನಡೆದಿದ್ದು, ಇದೇ ಕೊಲೆಗೆ ಪ್ರಮುಖ ಕಾರಣವಾಗಿದೆ. ಜುಲೈ 30ರಂದು ಅಜೇಂದ್ರ ಶೆಟ್ಟಿಯನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿ ಅಜೇಂದ್ರ ಶೆಟ್ಟಿಯ ಕೊರಳಿನಲ್ಲಿದ್ದ ಚಿನ್ನದ ಚೈನ್ ಮತ್ತು ಅವರ ಹೊಸ ಹೊಂಡಾ ಸಿಟಿ ಕಾರನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ. ಅನೂಪ್ ಪಟ್ಟಿಯು ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ಧ ಅಜೇಂದ್ರ ಶೆಟ್ಟಿಯ ಅಣ್ಣ ಮಹೇಂದ್ರ ಶೆಟ್ಟಿಯು ನೀಡಿರುವ ದೂರಿನಂತೆ ಕುಂದಾಪ್ರರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಬಂಧನಕ್ಕಾಗಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ. ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಜುಲೈ 31 ರಂದು ಗೋವಾ ರಾಜ್ಯದ ಕೋಲ್ವಾ ಬೀಚ್ ಬಳಿ ಬಂಧಿಸಲಾಗಿದೆ. ಆತನು ಸುಲಿಗೆ ಮಾಡಿಕೊಂಡು ಹೋಗಿರುವ ಕಾರನ್ನು ವಿಶೇಷ ತಂಡದಲ್ಲಿದ್ದ ಬೈಂದೂರು ಸಿಪಿಐ ರವರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ವರದಿಯಾದ 24 ಗಂಟೆಯೊಳಗಾಗಿ ಭೇದಿಸುವಲ್ಲಿ ಯಶಸ್ವಿಯಾಗಿ ಸಾರ್ವಜನಿಕರ ಪ್ರಶಂಸೆಗೊಳಗಾಗಿರುತ್ತಾರೆ ಎಂದರು
ಪ್ರಕರಣದ ಭೇದಿಸಲು ರಚಿಸಲಾದ ವಿಶೇಷ ತಂಡದಲ್ಲಿ ಶ್ರೀಧರ್ ನಾಯ್ಕ ಪಿ.ಎಸ್.ಐ. ಶಂಕರನಾರಾಯಣ, ನಂಜನಾಯ್ಕ ಪಿ.ಎಸ್.ಐ. ಗಂಗೊಳ್ಳಿ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡರವರೊಂದಿಗೆ ಉಪವಿಭಾಗದ ಸಿಬ್ಬಂದಿಯವರಾದ ಮೋಹನ, ಚಂದ್ರಶೇಖರ ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಸಹಕರಿಸಿರುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ. ಶ್ರೀಕಾಂತ್, ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷರಾದ ಸಂತೋಷ ಕಾಯ್ಕಿಣಿ, ಶಂಕರನಾರಾಯಣ ಪಿಎಸ್ ಐ ಶ್ರೀಧರ್ ನಾಯ್ಕ, ಗಂಗೊಳ್ಳಿ ಪಿಎಸ್ ಐ ನಂಜಾ ನಾಯ್ಕ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡ ಉಪಸ್ಥಿತರಿದ್ದರು.