ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು ಶಿರೂರಿನಿಂದ ತೂದಳ್ಳಿ ಮಾರ್ಗವಾಗಿ ಸಾಗಿ ಮುಂದೆ 4 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದಾಗ ಮಿನಿ ಜೋಗ ಖ್ಯಾತಿಯ ಕೂಸಳ್ಳಿಯ ಅಬ್ಬಿ ಜಲಪಾತ ಎದುರುಗೊಳ್ಳುತ್ತದೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸುರಿನ ಪಶ್ಚಿಮ ಘಟ್ಟದ ಕಾನನದ ನಡುವೆ ಹತ್ತಾರು ಚಿಕ್ಕ ಪುಟ್ಟ ತೊರೆಗಳನ್ನು ದಾಟಿ, ಅಲ್ಲಲ್ಲಿ ಎದುರಾಗುವ ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ತೆರಳುವ ಕಾಡುಹಾದಿ ಚಾರಣಪ್ರೀಯರ ಅಚ್ಚುಮೆಚ್ಚಿನ ತಾಣ.
ನೂರಾರು ಅಡಿ ಎತ್ತರದಿಂದ ಎರಡು ಹಂತದಲ್ಲಿ ಧುಮುಕುವ ಜಲಪಾತದ ಹಾಲ್ನೊರೆಯನ್ನೊಮ್ಮೆ ನೋಡಿ ಕಣ್ಣುತುಂಬಿಕೊಳ್ಳಬೇಕು. ಫೆಬ್ರವರಿಯ ತನಕ ಸಾಮಾನ್ಯವಾಗಿ ನೀರಿದ್ದರೂ ಮಳೆಗಾಲದಲ್ಲಿ ಇದರ ಅದ್ಬುತ ಸೋಬಗನ್ನು ವರ್ಣಿಸಲಸಾಧ್ಯ. ಜಲಪಾತದಿಂದ ಹರಿಯುವ ನೀರು ಸುಂಕದಗುಂಡಿಯ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಈ ನಡುವೆ ನೂರಾರು ಕೃಷಿ ಭೂಮಿಗಳಿಗೂ ಆಸರೆಯಾಗಿದೆ.
ಜಲಪಾತದ ತನಕ ಕ್ರಮಿಸುವುದಕ್ಕೆ ಕ್ಲಿಷ್ಟ ಹಾದಿಯಿದ್ದರೂ ಅಲ್ಲಿನ ಸೋಬಗಿನ ಮಂದೆ ಅವೆಲ್ಲವೂ ನಗಣ್ಯವೆನಿಸುತ್ತದೆ. ಯಾವ ದೊಡ್ಡ ಜಲಪಾತಗಳಿಗೂ ಪರ್ಯಾಯವಾಗಬಲ್ಲ ಈ ಜಲಪಾತ ಮಾಹಿತಿ ಕೊರತೆಯಿಂದ ಮರೆಯಲ್ಲಿಯೇ ಉಳಿದಿದೆ.