ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಫುಡ್ ಸೈನ್ಸ್ ಆಂಡ್ ನ್ಯೂಟ್ರಿಷನ್ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಒಂದು ದಿನದ ಆನ್‌ಲೈನ್ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ವಿಭಾಗದ ಹಿರಿಯ ವಿದ್ಯಾರ್ಥಿಗಳಾದ ಅಬುದಾಬಿ ಅಹಲ್ಯಾ ಆಸ್ಪತ್ರೆಯ ಕ್ಲಿನಿಕಲ್ ಡಯಟಿಷನ್ ರಾಧಿಕಾ ಹಾಗೂ ಫುಡ್ ಸರ್ವಿಸ್ ಡಯಟಿಷನ್ ಸಾಯಿಕೃತಿಕಾ ಭಾಗವಹಿಸಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ರಾಧಿಕಾ, ಗರ್ಭಧಾರಣೆ ಸಮಯದಲ್ಲಿ ಉತ್ತಮ ಆಹಾರ ಪದ್ಧತಿ ಹಾಗೂ ಮಕ್ಕಳಿಗೆ ಎದೆಹಾಲುಣಿಸುವಿಕೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಮಗುವಿನ ಬೆಳೆವಣಿಗೆಯಾಗುವವರೆಗೂ ತಾಯಿಯ ಎದೆಹಾಲನ್ನು ಆಹಾರವಾಗಿ ನೀಡಬಹುದು ಎಂದರು.
ಬಳಿಕ ಮಾತನಾಡಿದ ಸಾಯಿಕೃತಿಕಾ ಸ್ತನ್ಯಪಾನದಿಂದ ತಾಯಿ ಹಾಗೂ ಮಗುವಿನ ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಳ್ಳುತ್ತದೆ. ಅಲ್ಲದೆ ಮಗುವನ್ನು ರೋಗರುಜಿನಗಳಿಂದ ರಕ್ಷಿಸುತ್ತದೆ ಹಾಗೂ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದರು.
ಈ ಸಂದರ್ಭ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ವಿಭಾಗದ ಮುಖ್ಯಸ್ಥೆ ಡಾ ಅರ್ಚನ ಪ್ರಭಾತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗ್ಲೆನಿಟಾ ಮೆನೆಜಸ್ ಸ್ವಾಗತಿಸಿ, ನವ್ಯ ಬಿ ಜಿ ವಂದಿಸಿ, ಜ್ಯೋತಿ ಎನ್ ಕಾರ್ಯಕ್ರಮ ನಿರೂಪಿಸಿದರು.