Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಸಂಶೋಧಕ ಬಾಂಡ್ಯ ಶ್ರೀಕಾಂತ ಪೈ ಅವರಿಗೆ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಸ್ತು, ತಾಳ್ಮೆ, ಗೌರವ ಅತಿ ಮುಖ್ಯ. ಶಿಸ್ತು ತಾಳ್ಮೆಯಿಂದ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ಮಾಡಬಹುದು. ಇಂದಿನ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಬಾಲ್ಯದಲ್ಲಿ ಗುರು ಹಿರಿಯರಿಂದ ಪಡೆದ ಸಂಸ್ಕಾಯುತ ಶಿಕ್ಷಣ ಮುಂದಿನ ನಮ್ಮ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ. ವಿದ್ಯಾರ್ಥಿ ಜೀವನದ ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಸ್ಥಾನಕ್ಕೇರುವ ಪ್ರಯತ್ನ ಮಾಡಬೇಕು ಎಂದು ಸಂಶೋಧಕ ಬಾಂಡ್ಯ ಶ್ರೀಕಾಂತ ಪೈ ಹೇಳಿದರು.

ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಹಾಗೂ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಜರಗಿದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಲ್ಯಾಕ್ ಫಂಗಸ್‌ಗೆ ಔಷಧಿಯನ್ನು ಸಂಶೋಧಿಸಿ ಸಮಾಜಕ್ಕೆ ಅರ್ಪಿಸಿದ ಬಿ.ಶ್ರೀಕಾಂತ ಅಣ್ಣಪ್ಪ ಪೈ ಅವರನ್ನು ಜಿಎಸ್‌ವಿಎಸ್ ಅಸೋಸಿಯೇಶನ್ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಪರವಾಗಿ ಗೌರವಿಸಲಾಯಿತು. 2019-20ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಫ್ಸಾ ಅವರಿಗೆ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರು ಕೊಡಮಾಡಿದ ಚಿನ್ನದ ಪದಕ ಮತ್ತು 5 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು. 2019-20ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಗ ಗಳಿಸಿದ ಪ್ರಸನ್ನಾ ಪೈ ಅವರನ್ನು ಅಭಿನಂದಿಸಲಾಯಿತು.

ಆಡಳಿತ ಮಂಡಳಿ ಸದಸ್ಯರಾದ ಜಿ.ಗೋವಿಂದ್ರಾಯ ಆಚಾರ್ಯ, ಎಂ.ವಿನೋದ ಪೈ, ಎಂ.ನಾಗೇಂದ್ರ ಪೈ, ಎಸ್.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉಮೇಶ ಕರ್ಣಿಕ್, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ ನಾಯಕ್ ಸ್ವಾಗತಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಶಾಲೆಟ್ ಲೋಬೊ ಮತ್ತು ಪ್ರವೀಣ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಸುಗಣ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ವಂದಿಸಿದರು.

Exit mobile version