Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯವಾದ ಮತ್ತು ರಾಜಕೀಯ – ದೇಶಕ್ಕಾಗಿ ನಾನೇನು ಮಾಡಿದ್ದೇನೆಂಬ ಚಿಂತನೆ ನಮ್ಮೊಳಗಿರಲಿ

ರಾಷ್ಟ್ರೀಯತೆ ಇತ್ತೀಚೆಗೆ ಭಾರಿ ಚರ್ಚೆಯಲ್ಲಿರುವ ವಿಷಯ ರಾಜಕೀಯ ಪ್ರೇರಿತವಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಆದರೆ ರಾಷ್ಟ್ರೀಯವಾದ ಎನ್ನುವ ಆ ಪದವೇ ಹೇಳುವಂತೆ ದೇಶದ ಪ್ರಜೆ ಎಂತದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಷ್ಟ್ರದ ಪರ ನಿಲ್ಲುವಂತದ್ದು. ಅಂದರೆ ದೇಶದ ಒಂದು ಸರ್ಕಾರವನ್ನೊ, ರಾಜಕೀಯ ಪಕ್ಷಗಳನ್ನೊ ಟೀಕಿಸುವ ಭರದಲ್ಲಿ ರಾಷ್ಟ್ರದ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ರಾಷ್ಟ್ರೀಯವಾದ ಎನ್ನಲಾಗದು.

ರಾಷ್ಟ್ರೀಯವಾದ ಎನ್ನುವಂತದ್ದು ಪಕ್ಷ, ರಾಜಕಾರಣ ಎಡಪಂಥೀಯ, ಬಲಪಂಥೀಯ, ಕೋಮುವಾದ, ಜಾತಿವಾದ ಇವೆಲ್ಲದರ ಹೊರತಾದದು. ರಾಷ್ಟ್ರೀಯತೆ ಎನ್ನುವಂತದ್ದು ಯಾವುದೇ ಒಂದು ಪಕ್ಷ ಸಂಘಟನೆಗಳಿಗೆ ಸೀಮಿತವಾದದಲ್ಲ. ನನ್ನ ರಾಷ್ಟ್ರದ ಬಗೆಗೆ ಇರುವ ಅದಮ್ಯವಾದ ಪ್ರೀತಿ ರಾಷ್ಟ್ರೀಯವಾದವನ್ನು ಸೂಚಿಸುತ್ತದೆ. ದೇಶದ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾತಿ ಧರ್ಮ ಪಕ್ಷ ಭೇದ ಮರೆತು ದೇಶದ ಪರ ನಿಲ್ಲಬೇಕಾದದ್ದು ದೇಶದ ಪ್ರಜೆಗಳ ಕರ್ತವ್ಯ. ದೇಶದ ಒಳಗೆ ಹೊರಗೆ ಇರುವ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವುದು ರಾಷ್ಟ್ರೀಯವಾದ. ಆದರೆ ಇತ್ತೀಚೆಗೆ ರಾಷ್ಟ್ರೀಯವಾದ ಎಂದ ತಕ್ಷಣ ಬಿಜೆಪಿ ಪಕ್ಷದವ, ಕೋಮುವಾದಿ ಮನಸ್ಥಿತಿ ಮುಂತಾದ ಹಣೆಪಟ್ಟಿಗಳನ್ನು ಕಟ್ಟಲಾಗುತ್ತಿದೆ.

ಭಾರತೀಯರ ರಾಷ್ಟ್ರೀಯತೆಯ ಕಲ್ಪನೆ ವಿಶ್ವದ ಬೇರೆ ರಾಷ್ಟ್ರಗಳಿಗಿಂತ ವಿಭಿನ್ನವಾದುದು. ಬೇರೆ ರಾಷ್ಟ್ರಗಳಿಗೂ ದೇಶವನ್ನು ತಾಯಿ ಸ್ವರೂಪದಲ್ಲಿ ಕಾಣುವ ಭಾರತೀಯರಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ದೇಶ ಬೇರೆ ಬೇರೆ ವಿಭಿನ್ನ ಸಂಸ್ಕೃತಿ, ಜಾತಿ, ಧರ್ಮ, ಭಾಷೆ ಮೊದಲಾದ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ಒಂದು ವೈವಿಧ್ಯಮಯ ರಾಷ್ಟ್ರ. ರಾಷ್ಟ್ರೀಯವಾದವಿಲ್ಲದೆ ದೇಶ ಭಕ್ತಿ ಇಲ್ಲ. ಈ ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸಿ ದೇಶದ ಕೀರ್ತಿಯನ್ನು ಕೊಂಡಾಡುವವನೆ ನಿಜವಾದ ರಾಷ್ಟ್ರೀಯವಾದಿ.

ಈ ಎಲ್ಲ ವಿಭಿನ್ನತೆಗಳ ನಡುವೆ ದೇಶ ಮೊದಲು ಎಂದು ಸಾರುವುದೇ ರಾಷ್ಟ್ರೀಯತೆ. ಎಡ, ಬಲ ಮೊದಲಾದ ಸೈದ್ದಾಂತಿಕತೆಗಳು ಬೇರೆ ಬೇರೆ ವಿಚಾರಗಳ ಮೇಲೆ ನಿಂತಿದ್ದರೆ ರಾಷ್ಟ್ರೀಯವಾದ ಎನ್ನುವಂತದ್ದು ದೇಶದ ಹಿತಾಸಕ್ತಿಗೆ ಸಂಬಂಧಿಸಿದೆ. ರಾಷ್ಟ್ರೀಯವಾದಿ ಎನ್ನಿಸಿಕೊಂಡವರನ್ನು ಬೇರೆ ಬೇರೆ ದೃಷ್ಟಿಯಲ್ಲಿ ವ್ಯಾಖ್ಯಾನಿಸಿ ಅದಕ್ಕೆ ರಾಜಕೀಯ ಬಣ್ಣ ಹಚ್ಚುವವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಇದು ಬದಲಾಗಬೇಕು. ರಾಷ್ಟ್ರೀಯವಾದ ಎನ್ನುವಂತದ್ದು ಯಾವುದೊ ವ್ಯಕ್ತಿ, ಪಕ್ಷ ಧರ್ಮಗಳಿಗೆ ಸೀಮಿತವಾಗಿಲ್ಲ. ಈ ನೆಲದ ಕಾನೂನನ್ನು ಗೌರವಿಸಿ ರಾಷ್ಟ್ರವನ್ನು ಪ್ರೀತಿಸುವ ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರೀಯವಾದಿಯೇ. ಸರ್ಕಾರಗಳನ್ನಾಗಲಿ, ವ್ಯವಸ್ಥೆಗಳನ್ನಾಗಲಿ ವಿಷಯಾದರಿತವಾಗಿ ದೇಶದ ಹಿತದೃಷ್ಟಿಯಿಂದ ಪ್ರಶ್ನಿಸಬೇಕೆ ವಿನಃ ರಾಷ್ಟ್ರದ ಒಬ್ಬ ಪ್ರಜೆಯಾಗಿ ವಿನಾಕಾರಣ ಟೀಕಿಸಿ ವಿಶ್ವ ರಾಷ್ಟ್ರಗಳೆದುರು, ವೀರೋದಿಗಳೆದುರು ಭಾರತಿಯರು ತಲೆ ತಗ್ಗಿಸುವಂತೆ ಮಾಡುವುದನ್ನು ರಾಷ್ಟ್ರೀಯವಾದ ಸಹಿಸುವುದಿಲ್ಲ. ನನ್ನ ದೇಶ ಹಾಗೂ ಅದರ ಸಂಸ್ಕೃತಿ ಆಚಾರ ವಿಚಾರಗಳ ಕುರಿತು ವಿಶ್ವ ರಾಷ್ಟ್ರಗಳು ಕೊಂಡಾಡುವಂತ ವಾತಾವರಣ ಸೃಷ್ಟಿಸಬೇಕೆ ವಿನಃ ಯಾವ ಭಾರತಿಯನು ವಿಶ್ವ ರಾಷ್ಟ್ರಗಳೆದುರು ತಲೆ ತಗ್ಗಿಸುವಂತೆ ಮಾಡಬಾರದು. ಇತ್ತಿಚೆಗೆ ದೇಶದ ಉಪ್ಪು ತಿನ್ನುವ ನಮ್ಮದೆ ಜನ, ನಮ್ಮದೆ ಭಾರತೀಯ ಮಾದ್ಯಮಗಳು ಒಂದಷ್ಟು ಆಧಾರ ರಹಿತ ವರದಿಗಳನ್ನು ಬಿತ್ತರಿಸಿ ದೇಶವನ್ನು ಬೆತ್ತಲೆಗೊಳಿಸುವ ಭ್ರಮೆಯಲ್ಲಿದ್ದಾರೆ. ನಾವು ದೇಶ ವಾಸಿಗಳಾಗಿ ನಿಜವಾಗಿ ಪ್ರಶ್ನಿಸಬೇಕಾದದ್ದು ಆಡಳಿತ ವ್ಯವಸ್ಥೆಯನ್ನು ಹೊರತು ಯಾರನ್ನೂ ಟೀಕಿಸುವ ಭರದಲ್ಲಿ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸಬಾರದು.

ಆಡಳಿತ ಪಕ್ಷ ಯಾವುದೇ ಇರಲಿ ಈ ದೇಶದ ಪ್ರಜೆಯಾಗಿ ನಾವೆಲ್ಲರೂ ಆಡಳಿತ ವರ್ಗವನ್ನು ಪ್ರಶ್ನೆ ಮಾಡಿ ಪರಿಹಾರ ಕಂಡುಕೊಳ್ಳಲೇಬೇಕು. ಆಗಲೆ ಅಧಿಕಾರ ವರ್ಗದವರಿಗೆ ಬಿಸಿ ಮುಟ್ಟುವುದು,ಆಡಳಿತ ವ್ಯವಸ್ಥೆ ಚುರುಕಾಗುವುದು

ಅದನ್ನು ವಿಷಯಾಧಾರಿತವಾಗಿ ಪ್ರಶ್ನಿಸಬೇಕೆ ವಿನಃ ಯಾರನ್ನೊ ಮೆಚ್ಚಿಸಲು ಬರೇ ಟೀಕಿಸುವುದನ್ನೆ ಬಂಡವಾಳ ಮಾಡಿಕೊಂಡರೆ ದೇಶ ವಿರೋಧಿಗಳೆದುರು ರಾಷ್ಟ್ರ ತಲೆ ತಗ್ಗಿಸಬೇಕಾಗುತ್ತದೆ. ಇದರಿಂದ ಯಾವುದೊ ಒಬ್ಬ ರಾಜಕಾರಣಿಯೊ, ಪಕ್ಷಕ್ಕೂ ನಷ್ಟವಾಗುವುದಕ್ಕಿಂತ ದೇಶಕ್ಕೆ ನಷ್ಟ ಎನ್ನುವುದನ್ನು ಮರೆಯಬಾರದು. ಭಯೋತ್ಪಾದಕ ದಾಳಿಗಳಾದಾಗ, ಗಡಿಗಳಲ್ಲಿ ಯುದ್ಧದ ಪರಿಸ್ಥಿತಿ ಉಂಟಾದಾಗ ನಾವು ರಾಷ್ಟ್ರದ ಪರ ನಿಂತು ರಾಷ್ಟ್ರ ವಿರೋಧಿ ಶಕ್ತಿಗಳನ್ನು ಖಂಡಿಸಬೇಕೆ ವಿನಃ ಸರ್ಕಾರಗಳನ್ನು ಟೀಕಿಸುವುದೊ, ಶತ್ರು ರಾಷ್ಟ್ರಗಳ ಪರ ವಕಾಲತ್ತು ವಹಿಸುವುದೊ, ಆರೋಪಿಗಳಿಗೆ ಅನುಕಂಪ ತೋರುವಂತದ್ದಲ್ಲ. ಆದರೆ ನಮ್ಮ ದೇಶದಲ್ಲಿ ಬಹುತೇಕ ಸಂದರ್ಭಗಳಲ್ಲಿ ಆಡಳಿತ ವಿರೋಧ ಪಕ್ಷಗಳ ನಡುವೆ ಇದೆ ವಿಚಾರಗಳಿಗೆ ರಾಜಕೀಯ ಜಟಾಪಟಿಗಳು ಕಚ್ಚಾಟಗಳು ನಡೆಯುದುಂಟು ಅಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ದೇಶ ವಿರೋಧಿ ಘೋಷಣೆಗಳನ್ನು, ಸೈನಿಕರ ವಿರುದ್ಧ ಘೋಷಣೆಗಳನ್ನು ಕೂಗುವುದು ಇಂತ ಬೆಳವಣಿಗೆಗಳು ರಾಷ್ಟ್ರೀಯವಾದಕ್ಕೆ ಧಕ್ಕೆ ತರುತ್ತದೆ. ನಾವು ‘ದೇಶ ನನಗೇನು ಕೊಟ್ಟಿದೆ’ ಎನ್ನುವುದಕ್ಕಿಂತ ‘ದೇಶಕ್ಕಾಗಿ ನಾನೇನು ಮಾಡಿದ್ದೇನೆ’ ಎನ್ನುವ ಚಿಂತನೆಯನ್ನು ರೂಢಿಸಿಕೊಳ್ಳಬೇಕು, ಅದನ್ನೇ ನಮ್ಮ ಮುಂದಿನ ಪೀಳಿಗೆಗೂ ತಿಳಿಸಬೇಕು.

ಕೊನೆಯಾದಾಗಿ ಈ ರಾಷ್ಟ್ರವನ್ನು ಪ್ರೀತಿಸುವ ಒಬ್ಬ ಸಾಮಾನ್ಯ ಪ್ರಜೆಯಾಗಿ ಇಷ್ಟು ಹೆಳಬಲ್ಲೆ ರಾಷ್ಟ್ರ ಮೊದಲು ಎನ್ನುವುದು ತಪ್ಪಲ್ಲ. ರಾಷ್ಟ್ರೀಯವಾದಿ ಎನಿಸಿಕೊಳ್ಳಲು ಹಿಂಜರಿಕೆ ಬೇಡ ನಾನು ಒಬ್ಬ ರಾಷ್ಟ್ರೀಯವಾದಿ ಎಂದು ಹೆಮ್ಮೆಯಿಂದ ಹೇಳಬಲ್ಲೆ.

ರವಿರಾಜ್ ಬೈಂದೂರು, ಯುವ ಬರಹಗಾರ

Exit mobile version