ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿರುವ ತಾಲೂಕಿನ ಬಿಜಾಡಿಯ ಹರೀಶ್ ಬಂಗೇರ ಬಿಡುಗಡೆಯ ಪ್ರಯತ್ನ ಯಶಸ್ವಿಯಾಗಿದ್ದು, ಆ.18ರಂದು ತಾಯ್ನಾಡಿಗೆ ಹಿಂತಿರುಗಲಿದ್ದಾರೆ.
ಇಂದು ದಮಾಮ್ ವಿಮಾನ ನಿಲ್ದಾನದ ಮೂಲಕ ಹೊರಟಿದ್ದು ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಈ ಬಗ್ಗೆ ರಿಯಾದ್ನ ರಾಯಭಾರಿ ಕಛೇರಿಯಿಂದ ಮಾಹಿತಿ ಬಂದಿರುವುದಾಗಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಎರಡು ದಿನಗಳ ಹಿಂದೆ ತಿಳಿಸಿದರು.
ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ವ್ ಹಾಕಿದ್ದ ಆರೋಪದ ಮೇಲೆ ಹರೀಶ್ ಬಂಗೇರರನ್ನು 2019ರ ಡಿಸೆಂಬರ್ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ಹರೀಶ್ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರನ್ನು ಬಂಧಿಸಿದ್ದು, ಅವರು ಹರೀಶ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್ ಹಾಕಿ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ವೈರಲ್ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು.
ಸೌದಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಹರೀಶ್ ಬಂಗೇರ ಮಂಗಳೂರಿನ ಗೋಲಿಬಾರ್ ಘಟನೆಯ ಬಗ್ಗೆ ತಮ್ಮ ಫೇಸ್ಬುಕ್’ನಲ್ಲಿ ಪೋಸ್ವ್ ಮಾಡಿದ್ದರು. ಇದರ ವಿರುದ್ಧ ಅಲ್ಲಿನ ಕೆಲವು ಯುವಕರು ಹರೀಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಹರೀಶ್ ಅವರು ಫೇಸ್ಬುಕ್ ಮೂಲಕ ಕ್ಷಮೆ ಕೇಳಿ ಫೇಸ್ಬುಕ್ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಇದೇ ಘಟನೆ ವೈಷಮ್ಯ ಮುಂದುವರಿಸಿ ಹರೀಶ್ ಬಂಗೇರ ಹೆಸರಿನಲ್ಲಿಯೇ ಫೇಸ್ಬುಕ್ ನಕಲಿ ಖಾತೆ ತೆರೆದು, ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದು, ಅವರು ಬಂಧನಕ್ಕೊಳಗಾಗುವಂತಾಗಿತ್ತು. ಇದು ನಕಲಿ ಖಾತೆ ಎಂಬುದನ್ನು ದೃಢಪಡಿಸಿದ ಬಳಿಕ ಸೌದಿ ಪೊಲೀಸರು ಹರೀಶ್ ಅವರನ್ನು ಬಿಡುಗಡೆಗೊಳಿಸಿದೆ.