ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಫ್ರೆಂಡ್ಸ್ ಬೀಜಾಡಿ ಎಂಬ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಕೋಡಿ ಸಿವಾಕ್ ಸಮೀಪದಲ್ಲಿ ಅಬ್ಬರದ ಅಲೆಗಳ ಹೊಡೆತಕ್ಕೆ ನಾಡದೋಣಿಯ ಬಲೆ ಸಂಪೂರ್ಣ ಛಿದ್ರಗೊಂಡು ಲಕ್ಷಂತಾರ ರೂ. ಹಾನಿಗೀಡಾಗಿದೆ. ಮೀನುಗಾರಿಕೆಯ ಬಲೆಗಳು ಸೇರಿದಂತೆ ಹಲವು ಉಪಕರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.
ಬೀಜಾಡಿ ಹಮೀದ್ ಸಾಹೇಬ್ ಎಂಬುವರ ಮಾಲಿಕತ್ವದ ದೋಣಿಯಲ್ಲಿ ಸುಮಾರು20 ಕ್ಕೂ ಹೆಚ್ಚು ಮಂದಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿದ್ದು ಮೀನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದು, ಎಲ್ಲಾ ಮೀನುಗಾರರು ಸೇರಿ ಬಲೆಯನ್ನು ರಕ್ಷಣೆ ಮಾಡುವಲ್ಲಿ ಶ್ರಮ ವಹಿಸಿದರೂ ಅಲೆಗಳ ನೀರಿನ ಸೆಳತಕ್ಕೆ ಯಾವುದೇ ಪ್ರಯೋಜನವಾಗದೇ ಸಂಪೂರ್ಣ ಬಲೆ ತುಂಡು ತುಂಡಾಗಿ ಸೀವಾಕ್‌ನ ತಡೆಗೋಡೆಯ ಟೆಟ್ರಾಪೋಡ್ ಬ್ಲಾಕ್‌ಗಳಿಗೆ ಸಿಲುಕಿ ಹಿಡಿದ ಮೀನುಗಳು ಪುನಃ ಕಡಲು ಸೇರಿದೆ.
ಹಿಡಿದ ಮೀನು ಉಳಿಸಿಕೊಳ್ಳಲು ಪ್ರಯತ್ನ: ದಿನವಿಡೀ ಹಿಡಿದ ಮೀನುಗಳನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಯಾವುದೇ ಫಲ ಸಿಗಲಿಲ್ಲ. ಸೀವಾಕ್‌ನ ತಡೆಗೋಡೆಗಳ ಸಮೀಪವೇ ಈ ಘಟನೆ ಆಗಿರುವುದರಿಂದ ಅಬ್ಬರದ ಅಲೆಗಳ ಹೊಡೆತದಿಂದ ಮೀನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೀನುಗಾರರು ತಿಳಿಸಿದ್ದಾರೆ.