Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಹೈವೆ ನೆಕ್ಸ್ಟ್ (ಮಿನಿ) ಮಳಿಗೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ವಿನೂತನ ಯೋಜನೆಯಾದ ಹೈವೆ ನೆಕ್ಸ್ಟ್ (ಮಿನಿ) ಮಳಿಗೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಶಿರೂರಿನಲ್ಲಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಹಲವು ಸವಲತ್ತುಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಜೊತೆಗೆ ಇನ್ನಷ್ಟು ಸೌಲಭ್ಯಗಳು ಲಭಿಸಲಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್ ಹಾಗೂ ಎಮ್ಯುನಿಟಿಸ್ ಸೆಂಟರ್‌ಗಳನ್ನು ಮಾಡಲಾಗುತ್ತದೆ ಹಾಗೂ ಯಾತ್ರಿಗರ ಸೌಲಭ್ಯವನ್ನು ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಮುಂದಿನ ದಿನದಲ್ಲಿ ಹೆದ್ದಾರಿ ಪ್ರಾಧಿಕಾರದ ಸಹಕಾರದೊಂದಿಗೆ ಆದಷ್ಟು ಶೀಘ್ರ ಇನ್ನಷ್ಟು ವಿನೂತನ ಯೋಜನೆಗಳನ್ನು ಹೆದ್ದಾರಿ ಪ್ರಾಕಾರಗಳಲ್ಲಿ ಅನುಷ್ಟಾಣಗೊಳಿಸಲಾಗುವುದು ಎಂದರು ಮತ್ತು ಮಿನಿ ನೆಕ್ಸ್ಟ್ ನಿಂದ ಸರಳ ಹಾಗೂ ಅತ್ಯಂತ ರಿಯಾಯಿತಿ ದರದಲ್ಲಿ ಪ್ರಯಾಣಿಕರಿಗೆ ತುರ್ತು ಸೇವೆ ದೊರೆಯಲಿರುವುದು ಅತ್ಯಂತ ಉತ್ತಮ ವ್ಯವಸ್ಥೆಯಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಉತ್ತಮ ಕಾರ್ಯ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರಿನ ಪ್ರೊಜೆಕ್ಟ್ ಡೈರೆಕ್ಟರ್ ಶಿಶುಮೋಹನ್ ಬಂದ ಬಳಿಕ ಮಂಗಳೂರು ವಿಭಾಗದಲ್ಲಿ ಅತ್ಯಂತ ಉತ್ತಮ ಕಾರ್ಯಗಳು ನಡೆದಿದೆ ಮತ್ತು ಹೆದ್ದಾರಿ ವಿಭಾಗದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಬಹುವರ್ಷದಿಂದ ನೆನೆಗುದ್ದಿಗೆ ಬಿದ್ದಿರುವ ಕುಂದಾಪುರ ಶಾಸ್ತ್ರಿ ಪಾರ್ಕ್ ಪ್ಲೈ ಓವರ್ ಹಾಗೂ ಪಡುಬಿದ್ರಿ ಹೆದ್ದಾರಿ ಸಮಸ್ಯೆ ಇತ್ಯರ್ಥಗೊಳಿಸಿರುವ ಜೊತೆಗೆ ಕಾಮಗಾರಿ ಅತ್ಯಂತ ವೇಗ ಪಡೆದುಕೊಂಡಿದೆ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ತಂಡಕ್ಕೆ ಅಭಿನಂದನೆಗಳು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಶಿಶುಮೋಹನ ಪ್ರಾಸ್ತಾವಿಕವಾಗಿ ಮಾತನಾಡಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರದ ವಿನೂತನ ಯೋಜನೆಯಾಗಿರತಕ್ಕಂತ ಹೈವೆ ನೆಕ್ಸ್ಟ್ (ಮಿನಿ)ಯೋಜನೆ ಅತ್ಯಂತ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ.ಹೊಸದಾಗಿ ನಿರ್ಮಾಣಗೊಂಡಿರತಕ್ಕಂತ ಕಾರವಾರ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉತ್ತರ ಕನ್ನಡದಿಂದ ಶಿರೂರಿನವರೆಗೆ ಮೂರು ಟೋಲ್ ಪ್ಲಾಜಾಗಳು ಬರಲಿದ್ದು ಮೂರು ಟೋಲ್ ಪ್ಲಾಜಾಗಳಲ್ಲಿ ಕೂಡ ಈ ಸೇವೆ ದೊರೆಯಲಿದೆ. ಇದರಿಂದ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯುವ ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಗತ್ಯ ತುರ್ತು ಸಂದರ್ಭದಲ್ಲಿ ಹಾಲುಣಿಸುವುದು ಸೇರಿದಂತೆ ಇನ್ನೀತರ ಹೊಸ ಸೇವೆಗಳನ್ನು ಸೇರ್ಪಡಿಸುವ ಬಗ್ಗೆ ಚಿಂತನೆ ಯಿದ್ದು ಸದ್ಯದಲ್ಲೆ ಇವುಗಳು ಕೂಡ ಅನುಷ್ಟಾನಗೊಳ್ಳಲಿದೆ ಮತ್ತು ಹೆದ್ದಾರಿ ಪ್ರಾಧಿಕಾರದೊಂದಿಗೆ ನಿರಂತರ ಸಹಕಾರ ನೀಡುತ್ತಿರುವಂತ ಜಿಲ್ಲಾಡಳಿತ ಹಾಗೂ ಸಾರ್ವಜನಿಕರನ್ನು ಈ ಸಂದರ್ಭದಲ್ಲಿ ಶ್ಲಾಘೀಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಕಮಿಷನರ್ ರಾಜು, ಬಂದೂರು ತಹಶೀಲ್ದಾರ ಶೋಭಾಲಕ್ಷ್ಮೀ ಎಚ್. ಎಸ್., ಐ.ಆರ್.ಬಿ ಕಂಪೆನಿಯ ಸಿ.ಜಿ.ಎಫ್ ಮೋಹನ್‌ದಾಸ್, ಜನರಲ್ ಮೆನೇಜರ್ ವಿವೇಕ್ ಗರಡಿಕರ್, ಪ್ರಪ್ಪುಲ್ ಕಾಕಡೆ, ಅಜೇಯ್, ನವೀನ್ ಹಾಗೂ ರಾಷ್ಟ್ರೀಯ ಹೆದ್ದಾರಿ ವಿವಿಧ ಅಧಿಕಾರಿಗಳು ಹಾಜರಿದ್ದರು. ಪತ್ರಕರ್ತ ಅರುಣ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗುರು ವಂದಿಸಿದರು.

Exit mobile version