Kundapra.com ಕುಂದಾಪ್ರ ಡಾಟ್ ಕಾಂ

ಡಾ. ಶಾಂತಾರಾಮ್ ಶೆಟ್ಟಿ ಅವರಿಗೆ ‘ಸಿಎಂಇ ಎಕ್ಸಲೆನ್ಸ್ ದ್ರೋಣಾಚಾರ್ಯ’ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವೈದ್ಯಕೀಯ ರಂಗದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿರುವ ಗಣ್ಯರಿಗೆ ಕೊಡಮಾಡಲಾಗುವ ‘ಸಿಎಂಇ ಎಕ್ಸಲೆನ್ಸ್ ದ್ರೋಣಾಚಾರ್ಯ’ ಪ್ರಶಸ್ತಿಯನ್ನು ಈ ಬಾರಿ ಮಂಗಳೂರಿನ ಹಿರಿಯ ವೈದ್ಯ ಡಾ. ಶಾಂತಾರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

1942ರ ಏಪ್ರಿಲ್ 14ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡ್ಲಕಟ್ಟೆ ದೊಡ್ಡಮನೆಯ ಕಿದಿಯೂರು ತೇಜಪ್ಪ ಶೆಟ್ಟಿ ಮತ್ತು ಮೊಳಹಳ್ಳಿ ವಿಶಾಲಾಕ್ಷಿ ಶೆಟ್ಟಿ ದಂಪತಿ ಪುತ್ರನಾಗಿ ಬಂಟ್ಸ್ ಮನೆತನದಲ್ಲಿ ಜನಿಸಿದ ಡಾ. ಶಾಂತಾರಾಮ ಶೆಟ್ಟಿ ಅವರು, ಮಂಗಳೂರಿನ ಹಿರಿಯ ವೈದ್ಯರಾಗಿ, ಅಂತಾರಾಷ್ಟ್ರೀಯ ಖ್ಯಾತಿಯ ಓರ್ಥೋಪೆಡಿಕ್ ಸರ್ಜನ್, 50 ವರ್ಷಗಳ ವೈದ್ಯಕೀಯ ಬೋಧನೆ, ಉಪನ್ಯಾಸರಾಗಿ ಪ್ರಸ್ತುತ ಮಂಗಳೂರಿನ ತೇಜಸ್ವಿನಿ ಹಾಸ್ಪಿಟಲ್ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ, ನಿಟ್ಟೆ ವಿವಿಯ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ತನ್ನ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ವೈದ್ಯಕೀಯ ರಂಗದ ಇವರ ಅನನ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

Exit mobile version