Kundapra.com ಕುಂದಾಪ್ರ ಡಾಟ್ ಕಾಂ

ಹಬ್ಬದಲ್ಲಿ ಗಮ್ಮತ್ತಿರಲಿ, ಗೌಜು ಬೇಡ: ಎಸ್ಪಿ ಅಣ್ಣಾಮಲೈ

ಕುಂದಾಪುರ: ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವಾಗ ಸಂಭ್ರಮದಿಂದಲೇ ಮಾಡಿ, ಸಂತೋಷವನ್ನು ಹಂಚಿಕೊಳ್ಳಿ ಅದಕ್ಕೆ ಯಾರ ವಿರೋಧವೂ ಇಲ್ಲ ಆದರೆ ಅದು ಇತರರಿಗೆ ತೊಂದರೆಯನ್ನು ಕೊಡುವ ಮಟ್ಟಕ್ಕೆ ಹೋಗುವಂತಿರಬಾರದು ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಹೇಳಿದರು.

ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕುಂದಾಪುರ ಶಾಂತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾನೂನು ಪ್ರಕಾರ ಧ್ವನಿವರ್ಧಕಗಳು 50ಡೆಸಿಮಲ್‌ಕಿಂತ ಹೆಚ್ಚು ಸದ್ದು ಮಾಡಲು ಅವಕಾಶವಿಲ್ಲ. 10ಗಂಟೆಯ ನಂತರ ಉಪಯೋಗಿಸುವಂತೆಯೂ ಆದರೆ ಅದು ಸಾಧ್ಯವಿಲ್ಲವೆಂಬುದು ನಮಗೂ ತಿಳಿಯುತ್ತೆ. ಈ ವಿಚಾರದಲ್ಲಿ ಕಾನೂನನ್ನು ಸಡಿಸಿದ್ದೇವೆ. ರಾತ್ರಿ 10ಗಂಟೆಯ ಬಳಿಕ ಸಣ್ಣ ಧ್ವನಿಯನ್ನು ಬಳಸಿಕೊಳ್ಳಬಹುದು.

ಉಡುಪಿ ಜಿಲ್ಲೆಯಲ್ಲಿ 406 ಗಣೇಶ ಉತ್ಸವಗಳು ನಡೆಯುತ್ತವೆ. ಪೊಲೀಸರ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡಲು ಸಿದ್ಧರಿದ್ದೇವೆ. ಅದೇ ರೀತಿ ಗಣೇಶೋತ್ಸವ ಸಮಿತಿಗಳು ಕೂಡ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಸಾರ್ವಜನಿಕರು ಅನವಶ್ಯಕವಾಗಿ ಶಾಂತಿ ಕದಡಿದರೇ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

24ರಂದು ಬಕ್ರೀದ್ ಹಬ್ಬವೂ ಬರುತ್ತಿದೆ. ಈ ಸಂದರ್ಭದಲ್ಲಿಯೂ ಎಲ್ಲಾ ಧರ್ಮಿಯರು ಶಾಂತಿಯಿಂದಿದ್ದು, ದನಕಳ್ಳತನ ಮುಂತಾದವುಗಳ ಬಗ್ಗೆ ಎಚ್ಚರ ವಹಿಸಬೇಕು. ದನಗಳ್ಳತನದ ಬಗ್ಗೆ ಇಲಾಖೆಯೂ ಕ್ರಮಗೊಂಡಿದ್ದು ಜಿಲ್ಲೆಯಲ್ಲಿ ಎಲ್ಲೆಡೆ ಚೆಕ್‌ಪೋಸ್ಟ್ ಮಾಡಲಾಗಿದೆ. ನಮ್ಮ ಸಿಬ್ಬಂಧಿಗಳೂ ಈ ಬಗ್ಗೆ ಗಮನವಹಿಸುತ್ತಿದ್ದಾರೆ ಎಂದವರು ಹೇಳಿದರು.

ಸಭೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ,  ಕುಂದಾಪುರ ಉಪಾಧೀಕ್ಷಕ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕುಂದಾಪುರ ಠಾಣೆಯ ಉಪನಿರೀಕ್ಷಕ ನಾಸಿರ್ ಹುಸೈನ್, ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರದ ವಿಭಾಗದ ಎಲ್ಲಾ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಮುಸ್ಲಿಂ ಹಾಗೂ ಕ್ರೈಸ್ತ ಭಾಂದವರು ಶಾಂತಿಸಭೆಯಲ್ಲಿ ಭಾಗವಹಿಸಿದ್ದರು.

Exit mobile version