Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯುತ್‌ಗಾಗಿ ಪಂಚಾಯತ್ ಎನ್‌ಓಸಿ ಪಡೆಯುವ ಸುತ್ತೋಲೆ ಹಿಂಪಡೆಯುತ್ತೇವೆ: ಸಚಿವ ವಿ. ಸುನಿಲ್ ಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಗ್ರಾಮೀಣ ಭಾಗದ ಜನರು ವಿದ್ಯುತ್ ಪಡೆದುಕೊಳ್ಳಲು ಪಂಚಾಯತಿ ನಿರಪೇಕ್ಷಣಾ ಪತ್ರ (ಎನ್‌ಓಸಿ) ಪಡೆದುಕೊಳ್ಳಬೇಕಾಗಿದ್ದು ಇದರಿಂದ ಜನಸಾಮಾನ್ಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಇಲಾಖೆಯ ಈ ಸುತ್ತೋಲೆಯನ್ನು ಒಂದು ವಾರದೊಳಗೆ ವಾಪಾಸು ಪಡೆಯುವ ನಿರ್ಧಾರಕ್ಕೆ ಬರಲಾಗಿದ್ದು, ರಾಜ್ಯದಲ್ಲಿ ಎರಡೂವರೆ ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ವಿದ್ಯುತ್‌ಗಾಗಿ ಪಂಚಾಯತ್ ಎನ್‌ಓಸಿ ಪಡೆಯುವ ಸುತ್ತೋಲೆ ಹಿಂಪಡೆಯುತ್ತೇವೆ - ಸಚಿವ ವಿ. ಸುನಿಲ್ ಕುಮಾರ್

ಅವರು ಬೈಂದೂರು ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಬೈಂದೂರು ಬಿಜೆಪಿ ಕಛೇರಿಗೆ ತೆರಳಿ ಭಾರತಾಂಭೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದ.ಕ-ಉಡುಪಿ ಜಿಲ್ಲೆಯಲ್ಲಿನ ಸಿಂಗಲ್ ಫೇಸ್, ಲೋ ಓಲ್ಟೆಜ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತ್ವರಿತವಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಗೋಳಿಹೊಳೆ ಸಬ್ ಸ್ಟೇಷನ್‌ಗೆ ಅರಣ್ಯ ಇಲಾಖೆಯ ತೊಡಕು ಇದ್ದು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು. ರಾಜ್ಯದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ಬೊಮ್ಮಾಯಿ ಸರಕಾರ ಬದ್ಧವಾಗಿದೆ ಎಂದ ಅವರು, ಉಡುಪಿ ಜಿಲ್ಲೆಯ ಮೂವರು ಸಚಿವರು ಸೇರಿಕೊಂಡು ಶಾಶ್ವತವಾಗಿ ಆಗಬೇಕಾದ ಕಾರ್ಯಗಳ ಬಗ್ಗೆ ಕಾಲಮಿತಿಯಲ್ಲಿ ಯೋಜನೆ ಹಾಕಿಕೊಳ್ಳುತ್ತೇವೆ ಎಂದರು.

ಪೋಸ್ಟ್‌ರ್ ಹಚ್ಚುತ್ತಿದ್ದ, ಬ್ಯಾನರ್ ಕಟ್ಟುತ್ತಿದ್ದ ನನ್ನಂತ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಶಾಸಕನನ್ನಾಗಿ ಮಾಡಿದ ಪಕ್ಷ ಬಿಜೆಪಿ. ಕಾರ್ಕಳದ ಜನರು ಮೂರು ಭಾರಿ ಶಾಸಕನನ್ನಾಗಿ ಮಾಡಿದ್ದಾರೆ. ಇದೀಗ ಸಚಿವನನ್ನಾಗಿ ಮಾಡಿ ದೊಡ್ಡ ಇಲಾಖೆಯನ್ನು ಕೊಟ್ಟಿದ್ದಾರೆ. ಮುಂದೆ ಇರುವ ಸೀಮಿತ ಅವಧಿಯಲ್ಲಿ ಜನಪರವಾದ, ಹೊಸತನದ ಆಡಳಿತವನ್ನು ರಾಜ್ಯದ ಜನರ ಆಶೋತ್ತರವನ್ನು ಅರಿತು ಕೆಲಸ ಮಾಡುವ ಹಂಬಲವಿದೆ. ಬೈಂದೂರು ಹಾಗೂ ಕಾರ್ಕಳ ಕ್ಷೇತ್ರ ಭೌಗೋಳಿಕವಾಗಿ ಬೇರೆ ಬೇರೆಯಾಗಿದ್ದರೂ ಭಾವನೆ ಒಂದೇ. ಹಾಗಾಗಿ ಇಲ್ಲಿನ ಜನರ ಸಂಕಷ್ಟದ ಅರಿವು ನನಗಿದೆ. ಬೈಂದೂರು ಶಾಸಕರು ನಾನು ಸಚಿವನಾದ ತಕ್ಷಣ ಹಲವು ಬೇಡಿಕೆ ಇಟ್ಟಿದ್ದಾರೆ. ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಆಗಬೇಕಿದೆ. ಪ್ರಮುಖವಾಗಿ ೯೪ಸಿ, ಡಿಮ್ಡ್ ಫಾರೆಸ್ಟ್ ಸಮಸ್ಯೆಗಳು ಬಗೆಹರಿಯಬೇಕಿದೆ. ವಿದ್ಯುತ್ ಸಿಂಗಲ್ ಪೇಸ್ ಸಮಸ್ಯೆಗೂ ಮುಕ್ತಿ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದಲ್ಲಾದ ಕಾರ್ಯಗಳ ಬಗ್ಗೆ ಸಚಿವರಿಗೆ ತಿಳಿಸಲಾಗಿದೆ ಎಂದರು

ಈ ಸಂದರ್ಭ ಸಚಿವರನ್ನು ಬೈಂದೂರು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಯಿಲಾಡಿ ಮಾತನಾಡಿದರು. ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಕಮಲೇಶ್, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಪ್ರಕಾಶ್ ಜಿಡ್ಡು ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:
► ಬೈಂದೂರು ಸೇನೇಶ್ವರ ದೇವಸ್ಥಾನಕ್ಕೆ ಸಚಿವ ವಿ. ಸುನಿಲ್ ಕುಮಾರ್ ಭೇಟಿ – https://kundapraa.com/?p=52033 .

Exit mobile version