Kundapra.com ಕುಂದಾಪ್ರ ಡಾಟ್ ಕಾಂ

ಮೊಂತಿ ಫೆಸ್ತ್: ತಾಲೂಕಿನ ವಿವಿಧ ಚರ್ಚುಗಳಲ್ಲಿ ಸರಳ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ಮೊಂತಿ ಫೆಸ್ತ್ (ತೆನೆ ಹಬ್ಬ) ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಚರ್ಚುಗಳಲ್ಲಿ ಬುಧವಾರ ಸರಳವಾಗಿ ಆಚರಿಸಲಾಯಿತು.

ರೈತರು ಬೆಳೆದ ಭತ್ತದ ತೆನೆಯನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು. ಹೊಸ ತೆನೆಯನ್ನು ಮನೆಗೆ ತಂದು ಪ್ರಾಥನೆ ಮಾಡುವುದರ ಮೂಲಕ ಹಾಲು ಅಥವಾ ಪಾಯಸದೊಂದಿಗೆ ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ. ಈ ಹಬ್ಬವು ಸಸ್ಯಹಾರಿ ಭೋಜನಕ್ಕೆ ಹೆಸರಾಗಿದ್ದು, ವಿವಿಧ ಬಗೆಯ ತರಕಾರಿ ಖಾದ್ಯಗಳು ಹಬ್ಬದ ಊಟದಲ್ಲಿ ಇರುತ್ತದೆ. ಬೆಸ ಸಂಖ್ಯೆಯನ್ನು ಹೊಂದಿಕೊಂಡು ತರಕಾರಿ ಖಾದ್ಯಗಳನ್ನು ತಯಾರಿಸಲಗುತ್ತದೆ.

ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು. ಅತಿಥಿ ಗುರುಗಳಾದ ತ್ರಾಸಿ ಡೋನ್ ಬೊಸ್ಕೊ ಸಂಸ್ಥೆಯ ವಂ|ಮರ್ವಿನ್ ಫೆನಾಂಡಿಸ್ ಬಲಿದಾನ ಅರ್ಪಿಸಿ ಮೊಂತಿ ಹಬ್ಬವೆಂವುದು ನಾವು ಆಚರಿಸುವ ಹಬ್ಬಗಳಲ್ಲಿ ವಿಶಿಷ್ಟವಾದ ಹಬ್ಬವಾಗಿದೆ, ಮೇರಿ ಮಾತೆಯ ಮಾತ ಪಿತರು ಕನ್ಯೆ ಮರಿಯಮ್ಮಳನ್ನು ಸನ್ಮಾರ್ಗದಲ್ಲಿ ದೇವ ಭಕ್ತಿಯಿಂದ ಪೋಶಿಸಿದರು, ಅಂತೇಯೆ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ಪೋಶಿಸಬೇಕು, ಮೇರಿ ಮಾತೆ ಕಳಂಕ ರಹಿತೆ, ಹೆಣ್ಣು ಮಕ್ಕಳಿಗೆ ಆದರ್ಶೆ, ಅವಳು ಹೆಣ್ಣು ಮಕ್ಕಳಿಗೆ ಮಾರ್ಗದರ್ಶಕಿ, ಮಾತ್ರವಲ್ಲ ಇದೊಂದು ಕುಟುಂಬದ ಹಬ್ಬ, ಎಸುವಿನ ಕುಟುಂಬ ಪವಿತ್ರ ಕುಟುಂಬ ಇದು ನಮಗೆ ಆದರ್ಶವಾಗಲಿ’ ಎಂದು ಸಂದೇಶ ನೀಡಿದರು.

ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೊಸ ತೆನೆಗಳನ್ನು ಆಶಿರ್ವಾದಿಸಿ, ಪವಿತ್ರ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಷಯವನ್ನು ನೀಡಿದರು. ಸಹಾಯಕ ಧರ್ಮಗುರು ವಂ| ವಿಜಯ್ ಜೊಯ್ಸನ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಚಟುವಟಿ ನಿರ್ವಹಿಸಿ ಸಹಕರಿಸಿದರು.

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರುಗಳಾದ ರೆ.ಪಾ. ಚೇತನ್ ಲೋಬೋ, ರೆ.ಪಾ. ವಿನ್ಸೆಂಟ್ – ಕುವೆಲ್ಲೋ ಹಾಗೂ ಬ್ರದರ್ ಸ್ಟೀವನ್ ಡಿಸೋಜಾ ಅವರ ನೇತೃತ್ವದಲ್ಲಿ ಹಬ್ಬವನ್ನು ಆಚರಿಸಲಾಯಿತು.

ಚಿತ್ರಗಳು: ಎ ಒನ್ ಸ್ಟುಡಿಯೋ

Exit mobile version