Kundapra.com ಕುಂದಾಪ್ರ ಡಾಟ್ ಕಾಂ

ಪಂಚಾಯತ್ ರಾಜ್ ಒಕ್ಕೂಟ: ರಮೇಶಕುಮಾರ್ ಸಮಿತಿ ವರದಿ ಜಾರಿಗೆ ಆಗ್ರಹ

ಕುಂದಾಪುರ: ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ವಿರೋಧಿ ಅಂಶಗಳು ಮೇಲ್ಗೈ ಸಾಧಿಸಿದ ಕಾರಣ ಅದು ಅರ್ಥ ಕಳೆದುಕೊಂಡಿದೆ. ಇಲ್ಲಿ ಜನತಂತ್ರ ಪದ್ಧತಿಯ ಬದಲಿಗೆ ಅಧಿಕಾರಶಾಹಿ ವಿಜೃಂಭಿಸುತ್ತಿದೆ. ಅದರಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ನೈಜ ಉದ್ದೇಶವಾದ ಗ್ರಾಮೀಣಾಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಪಂಚಾಯತ್ ರಾಜ್ ಒಕ್ಕೂಟ ಮತ್ತು ಜನಪ್ರತಿನಿಧಿಗಳು ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ ರಾಜ್ಯ ಪಂಚಾಯತ್ ರಾಜ್ ಕಾಯಿದೆಗೆ ಸಮಗ್ರ ತಿದ್ದುಪಡಿ ಸೂಚಿಸಲು ಶಾಸಕ, ಮಾಜಿ ಸ್ಪೀಕರ್ ರಮೇಶಕುಮಾರ್ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಸಮಿತಿ ಇದೀಗ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತುನೀಡುವ ಶಿಫಾರಸುಗಳನ್ನು ಮಾಡಿದೆ. ಅವುಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಸ್ವೀಕರಿಸಲಾಯಿತು. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಸಲು ನಿರ್ಧರಿಸಿತು.

ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕಾನೂನು ಸಲಹೆಗಾರ ಹಾಗೂ ರಮೇಶಕುಮಾರ್ ಸಮಿತಿ ಸದಸ್ಯ ಟಿ. ಬಿ. ಶೆಟ್ಟಿ ಸಮಿತಿಯ ಪ್ರಮುಖ ಶಿಫಾರಸುಗಳ ಮಾಹಿತಿ ನೀಡಿ, ಅವು ಜಾರಿಯಾದರೆ ಅರ್ಥಪೂರ್ಣ ವಿಕೇಂದ್ರೀಕರಣ ಆಗುವುದರ ಜತೆಗೆ ಮೂರೂ ಸ್ತರದ ಪಂಚಾಯಿತಿಗಳು ಸಶಕ್ತವಾಗುವುವು ಮತ್ತು ಅವು  ಸ್ವಯಮಾಡಳಿತ ಸರಕಾರಗಳಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಅಶೋಕಕುಮಾರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ನಾಗೇಶ್ಚಂದ್ರ ಭಟ್ ಹಿಂದಿನ ವರ್ಷದ ಆಯವ್ಯಯ ವಿವರ ನೀಡಿದರು. ಉಪಾಧ್ಯಕ್ಷೆ ಪ್ರಭಾವತಿ ಶೆಟ್ಟಿ, ಗೌರವಾಧ್ಯಕ್ಷ ಎಸ್. ಜನಾರ್ದನ ಮರವಂತೆ, ಗೌರವ ಸಲಹೆಗಾರ ಬಿ. ದಾಮೋದರ ಆಚಾರ್ಯ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಮುಂದಿನವರನ್ನು ಮುಂದಿನ ಅವಧಿಯ ಪದಾಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಲಾಯಿತು : ಉದಯಕುಮಾರ ಶೆಟ್ಟಿ ವಂಡ್ಸೆ-ಅಧ್ಯಕ್ಷ; ವಾಣಿ ಶೆಟ್ಟಿ-ಉಪಾಧ್ಯಕ್ಷೆ; ಸದಾಶಿವ ಡಿ. ಪಡುವರಿ-ಪ್ರಧಾನ ಕಾರ್ಯದರ್ಶಿ; ಸುರೇಶ ಶೆಟ್ಟಿ ಗೋಪಾಡಿ-ಕೋಶಾಧಿಕಾರಿ; ಸರ್ವೋತ್ತಮ ಶೆಟ್ಟಿ ಮತ್ತು ಅನಿತಾ ಆರ್. ಕೆ-ಕಾರ್ಯದರ್ಶಿಗಳು; ಸಂಚಾಲಕರು-ಚಂದ್ರಶೇಖರ ಪೂಜಾರಿ (ವಂಡ್ಸೆ ವಲಯ); ಅಣ್ಣಪ್ಪ ಶೆಟ್ಟಿ (ಬೈಂದೂರು ವಲಯ); ಸತೀಶ ಪೂಜಾರಿ (ಕುಂದಾಪುರ ವಲಯ); ಕಾರ್ಯಕಾರಿ ಸಮಿತಿ ಸದಸ್ಯರು-ಜಲಜಾ ಮೊಗವೀರ, ಪ್ರಭಾವತಿ ಶೆಟ್ಟಿ, ಗಣೇಶ ದೇವಾಡಿಗ, ರಘುರಾಮ ರೈ, ಉದಯ ದೇವಾಡಿಗ,  ಸದಾಶಿವ ಶೆಟ್ಟಿ, ಬಾಲಚಂದ್ರ ಕುಲಾಲ, ಸುಭಾಸ್ ಶೆಟ್ಟಿ, ಪ್ರದೀಪ ಹೆಗ್ಡೆ, ಜ್ಯೋತಿ, ಜಯಂತಿ, ವಾಸುದೇವ ಪೂಜಾರಿ, ಕಿಶೋರ್‌ಕುಮಾರ ಶೆಟ್ಟಿ, ಅನಂತಮೂರ್ತಿ, ಅರವಿಂದ ಪೂಜಾರಿ. ಗೌರವಾಧ್ಯಕ್ಷ-ಎಸ್. ಜನಾರ್ದನ ಮರವಂತೆ; ಗೌರವ ಸಲಹೆಗಾರರು-ಟಿ. ಬಿ. ಶೆಟ್ಟಿ ಮತ್ತು ಬಿ. ದಾಮೋದರ ಆಚಾರ್ಯ

Exit mobile version