Kundapra.com ಕುಂದಾಪ್ರ ಡಾಟ್ ಕಾಂ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ, ಗಂಗೊಳ್ಳಿ (ತ್ರಾಸಿ) ಮಹಾಶಕ್ತಿ ಕೇಂದ್ರ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಬೈಂದೂರು-ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಶುಕ್ರವಾರ ಜರಗಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಾದರಿ ಆಡಳಿತದ ಮೂಲಕ ವಿಶ್ವ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ್ದಾರೆ. ಕರೋನಾ ವಿರುದ್ಧ ಯಶಸ್ವಿ ಹೋರಾಟ ನಡೆಸಿ, ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಲಸಿಕಾ ಅಭಿಯಾನವನ್ನು ಹಮ್ಮಿಕೊಂಡು ದೇಶದ ಜನರ ಪ್ರಾಣರಕ್ಷಣೆಗೆ ಮುಂದಾಗಿದ್ದಾರೆ. ಅವರ ಜನ್ಮದಿನ ಅವಿಸ್ಮರಣೀಯವಾಗಿಸಲು ೨೦ ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ರಕ್ತದಾನ ಎಲ್ಲಾ ದಾನಗಳಲೇ ಶ್ರೇಷ್ಠವಾಗಿದೆ. ಜೀವ ಉಳಿಸಲು ನೆರವಾಗುತ್ತದೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಹೇಳಿದರು.

ಗಂಗೊಳ್ಳಿ (ತ್ರಾಸಿ) ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಶಾಖೆಯ ಸಭಾಪತಿ ಜಯಕರ ಶೆಟ್ಟಿ ಶುಭಾಶಂಸನೆಗೈದರು. ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ಸಾಮ್ರಾಟ್ ಶೆಟ್ಟಿ ನಮೋ ಆಪ್ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ವಿನೋದ ಭಂಡಾರಿ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ಸುರೇಂದ್ರ ಖಾರ್ವಿ, ರೆಡ್‌ಕ್ರಾಸ್ ಸಂಸ್ಥೆಯ ಬೈಂದೂರು ಶಾಖೆಯ ಸಭಾಪತಿ ನಿತಿನ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಮಿಥುನ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ (ತ್ರಾಸಿ) ಮಹಾಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿ ಅಶೋಕ ಎನ್.ಡಿ. ಸ್ವಾಗತಿಸಿದರು. ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಧ್ಯಮ ಪ್ರಕೋಷ್ಠ ಸಂಚಾಲಕ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಗಂಗೊಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಗಣೇಶ ಶೆಣೈ ವಂದಿಸಿದರು.

Exit mobile version