Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಬಿಟಾ ಸಿಎಇ ಸಿಸ್ಟಮ್ಸ್ ನಡುವೆ ನೂತನ ಒಡಂಬಡಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ:
ಮೆಕ್ಯಾನಿಕಲ್ ಮತ್ತು ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಹಾಗೂ ಬೆಂಗಳೂರಿನ ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿನ ನುರಿತ ತಾಂತ್ರಿಕ ಮತ್ತು ವ್ಯವಸ್ಥಾಪಕ ಸಿಬ್ಬಂದಿಗಳ ತೀವ್ರ ಕೊರತೆಯನ್ನು ನೀಗಿಸುವಲ್ಲಿ ಈ ಒಡಂಬಡಿಕೆಯು ಸಹಕಾರಿಯಾಗಿದೆ. ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ.ನ ಸಿಇಒ ಸ್ಟಾವ್ರೋಸ್ ಕೆಲ್ಡಿಯಾರೆಸ್, ಸೌತ್ ಈಸ್ಟ್ ಏಷ್ಯಾ ರೀಜನ್ ಸೇಲ್ಸ್ ಹೆಡ್ ಲೋಕೆಶ್ ಎಸ್. ಬೊಮ್ಮಾನಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್ ಒಡಂಬಡಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕಂಪ್ಯೂಟರ್ ಯೈಡೆಡ್ ಇಂಜಿನಿಯರಿಂಗ್ ಸಿಸ್ಟಮ್ಸ್ ಕ್ಷೇತ್ರದಲ್ಲಿ ತರಬೇತಿಯನ್ನು ಒದಗಿಸುವ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ನೊಂದಿಗಿನ ಒಡಂಬಡಿಕೆಯು ಔದ್ಯೋಗಿಕ ಕ್ಷೇತ್ರದ ನಿರೀಕ್ಷೆ (ಪ್ರಾಕ್ಟಿಕಲ್) ಹಾಗೂ ಶೈಕ್ಷಣಿಕ ಕೊಡುಗೆಗಳ (ಥಿಯರಿ) ನಡುವಿನ ಅಂತರವನ್ನು ಉದ್ಯಮ ಕ್ಷೇತ್ರದ ನೇರ ಒಳಗೊಳ್ಳುವಿಕೆಯಿಂದ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಈ ಪರಸ್ಪರ ಸಹಭಾಗಿತ್ವದಿಂದ ಎಲ್ಲಾ ಪಾಲುದಾರರು, ಉದ್ಯಮ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಗರಿಷ್ಠ ಲಾಭ ಪಡೆಯಬಹುದಾಗಿದೆ. ಬಿಟಾ ಸಿಇಎ ಸಿಸ್ಟಮ್ಸ್, ಇಂಜಿನಿಯರಿಂಗ್‌ನಲ್ಲಿ ಬದಲಾವಣೆ ತಂದ ಹಾಗೂ ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆ ಹಾಗೂ ಕ್ಲಪ್ತ ಸಮಯಕ್ಕೆ ಗುರಿಯನ್ನು ಪೂರ್ಣಗೊಳಿಸುವ ವಿಶ್ವದರ್ಜೆಯ ಸಾಫ್ಟ್‌ವೇರ್‌ಗಳನ್ನು ಅಭಿವೃದ್ದಿ ಪಡಿಸಿ ನೀಡುತ್ತದೆ. ಕಂಪೆನಿಯು ಏರೋಸ್ಪೇಸ್, ರಕ್ಷಣಾ ವಲಯ, ಬಯೋಮೆಕ್ಯಾನಿಕ್ಸ್, ಇಲೆಕ್ಟ್ರಾನಿಕ್ಸ್ ಎನರ್ಜಿ ಮತ್ತು ಇತರ ಇಂಡಸ್ಟ್ರಿಗಳಲ್ಲಿ ತಮ್ಮ ಸಾಫ್ಟ್‌ವೇರ್‌ನ್ನು ನಿಯೋಜನೆ ಮಾಡಿದೆ.

ಸಿಇಎ ಸಿಮುಲೇಶನ್ ತರಬೇತಿ ನೀಡಲು ವಿದ್ಯಾರ್ಥಿಗಳಿಗೆ ಪರವಾನಗಿ ಪಡೆದ ಸಾಫ್ಟ್‌ವೇರ್‌ನ್ನು ನೀಡುವುದರ ಜೊತೆಗೆ ಅಪೇಕ್ಷಿತ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ, ಮಾನವ ಸಂಪನ್ಮೂಲವನ್ನು ಉದ್ಯಮದ ಅಗತ್ಯತೆಗಳಿಗೆ ಸಮರ್ಥವಾಗಿ ನಿಭಾಯಿಸಲು ಶ್ರಮಿಸುತ್ತದೆ. ಈ ಒಡಂಬಡಿಕೆಯು ಏರೋಸ್ಪೇಸ್, ಡಿಫೆನ್ಸ್, ಆಟೋಮೋಟಿವ್, ಮೋಟಾರ್ ಸ್ಪೋರ್ಟ್ಸ್, ಟ್ರಕ್ ಮತ್ತು ಬಸ್‌ಗಳು, ರೈಲು ವಾಹನಗಳು, ಭಾರೀ ಯಂತ್ರೋಪಕರಣಗಳು, ಬಯೋಮೆಕಾನಿಕ್ಸ್, ಇಲೆಕ್ಟ್ರಾನಿಕ್ಸ್ ಕೈಗಾರಿಕಾ ಉಪಕರಣಗಳಂತಹ ಆಟೋ ಉದ್ಯಮದ ಇತ್ತೀಚಿನ ಬೆಳವಣಿಗೆಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಮಾನ್ಯತೆ ಹೆಚ್ಚಿಸುವ ದೀರ್ಘಾವಧಿಯ ತರಬೇತಿಯನ್ನು ನೀಡುತ್ತದೆ. ಬಿಇ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವು ಮೂರನೇ ವರ್ಷದಲ್ಲಿ ಆರಂಭವಾಗಿ ಅಂತಿಮ ವರ್ಷದಲ್ಲಿ ಮುಗಿಯುತ್ತದೆ. ಈ ಕೋರ್ಸ್ ಪ್ರಸ್ತುತ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಿ-ಪ್ರೊಸೆಸರ್ ಮತ್ತು ಪೋಸ್ಟ್-ಪ್ರೊಸೆಸರ್ ಸಾಫ್ಟ್‌ವೇರ್ ಟೂಲ್‌ನ್ನು ಒಳಗೊಂಡಿದೆ. ಈ ತರಬೇತಿಗೆ ಒಟ್ಟು ೧೮೦ ಗಂಟೆಗಳ ಪಠ್ಯಕ್ರಮವನ್ನು ಯೋಜಿಸಲಾಗಿದೆ.

ಈ ಸಹಯೋಗದ ಅಡಿಯಲ್ಲಿ ಕಂಪೆನಿಯು 2 ಕೋಟಿ 20 ಲಕ್ಷ ರೂಪಾಯಿ ಮೌಲ್ಯದ 20 ಸಾಫ್ಟ್‌ವೇರ್‌ಗಳ ಪರವಾನಿಗಿಯನ್ನು ನೀಡುತ್ತಿದೆ. ಅಲ್ಲದೇ ಅವರು ನಮ್ಮ ಸಂಸ್ಥೆಯ ಆಟೋ ಕ್ಲಬ್‌ಗೆ ಹಣಕಾಸಿನ ಸಹಕಾರ ಹಾಗೂ ಕ್ಲಬ್ ಕಾರ್ಯಕ್ರಮಗಳಿಗೆ ತಾಂತ್ರಿಕ ಸಹಕಾರ ನೀಡುತ್ತಿದ್ದಾರೆ.

Exit mobile version