ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳ ನೇತೃತ್ವದಲ್ಲಿ ಹಸಿರು ಕೋಡಿ ಸಂಕಲ್ಪ ಮಾಡಲಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಸೆ.26, ಬೆಳಗ್ಗೆ 7ಕ್ಕೆ ಕೋಡಿ ಕಡಲ ತೀರ ಸ್ವಚ್ಛತಾ ನಡೆಯಲಿದೆ ಎಂದು ಕೋಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಹೇಳಿದ್ದಾರೆ.
ಗುರುವಾರ ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಜರುಗಿದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ವರ್ಲ್ಡ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ 70 ರಾಷ್ಟ್ರಗಳ ಗ್ರೀನ್ ಬಿಲ್ಡಿಂಗ್ ಮಾನ್ಯತೆ ಮಾಡಿದ್ದು, ಅದರಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಪ್ರಸಕ್ತ ಪ್ರಪಂಚದಲ್ಲಿ ಹಸಿರು ಕಟ್ಟಡ ವಿಸ್ತೀರ್ಣವು 7.80 ಬಿಲಿಯನ್ ಇದ್ದು 2022ರ ಹೊತ್ತಿಗೆ ಅದನ್ನು 10 ಬಿಲಿಯನ್‌ಗೆ ಏರಿಸುವ ಗುರಿಯಿದೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಬೆಂಗಳೂರು ಚಾಪ್ಟರ್ ಅಧ್ಯಕ್ಷ ಮೊಹಮದ್ ಬ್ಯಾರಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷರಾಗಿದ್ದು, ಕೋಡಿಯಲ್ಲಿ ಗ್ರೀನ್ ಮಸೀದಿ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದು, ಹಲವಾರು ರಾಷ್ಟ್ರ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಅವರ ಪರಿಕಲ್ಪನೆಯಲ್ಲಿ ಹಸಿರು ಕೋಡಿ ನಿರ್ಮಿಸುವ ಗುರಿಯಿಟ್ಟುಕೊಂಡಿದ್ದಾರೆ ಎಂದರು.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಹಸಿರು ಕೋಡಿ ರೂಪಿಸುವ ಗುರಿ ಹೊಂದಿದ್ದು, ಕೋಡಿ ಕಡಲ ತೀರ ಆಕರ್ಷಿಕ ಕೇಂದ್ರವನ್ನಾಗಿ ಮಾಡಲು ಮುನ್ನುಡಿ ಬರೆಯಲಾಗುತ್ತದೆ. ಜನರ ಸಹಕಾರದಲ್ಲಿ ಪರಿಸರ ಸ್ನೇಹಿ ಕೋಡಿ ಗ್ರಾಮವನ್ನಾಗಿ ರೂಪಿಸಲಾಗುತ್ತದೆ. ಪರಿಸರ ಸಂರಕ್ಷಣೆ, ಸಮತೋಲನದ ಅಗತ್ಯ ಅರಿವಿಗೆ ಬರುತ್ತಿದ್ದು, ಕರೋನಾ ನೀಡಿದ ಭಯಂಕರ ಅನುಭವ ಹಾಗೂ ಅಸ್ಥಿರತೆ ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಸ್ವಚ್ಛತೆಯ ಬಗ್ಗೆ ಎಚ್ಚೆತ್ತು, ಕೋಡಿ ಕಡಲ ತೀರ ಸ್ವಚ್ಛತೆ ಅಭಿಯಾನ ಒಂದು ಮಹತ್ವ ಪೂರ್ಣ ಕೆಲಸ ಎಂದು ವರು ಹೇಳಿದರು.
ಕೋಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಕೆ.ಅಬ್ದುಲ್ ರಹಮಾನ್, ಕೋಡಿ ಬ್ಯಾರೀಸ್ ಕಾಲೇಜ್ ಕಾಲೇಜ್ ಪ್ರಾಂಶುಪಾಲ ಸಿದ್ದಪ್ಪ ಇದ್ದರು.