ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ,ಸೆ.24: ಪ್ರಸಕ್ತ ಸಾಲಿನ “ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ” ಮೀನುಗಾರರ ಕಲ್ಯಾಣ ಯೋಜನೆಯಾದ ಉಳಿತಾಯ ಮತ್ತು ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಮೀನುಗಾರರ ಸಹಕಾರ ಸಂಘಗಳು 2021-22ನೇ ಸಾಲಿಗೆ ಸದಸ್ಯರ ಹೊಸ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ.
ಸದರಿ ಯೋಜನೆಯಡಿ ಭಾಗವಹಿಸಲು ಇಚ್ಛಿಸುವ ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿರುವವರಾಗಿದ್ದು, 18 ರಿಂದ 60 ವರ್ಷ ವಯೋಮಾನದವರಾಗಿರತಕ್ಕದ್ದು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬಿ.ಪಿ.ಎಲ್ ಕಾರ್ಡ್ ಪ್ರತಿ ಹಾಗೂ ಸಂಘದಲ್ಲಿ ಸದಸ್ಯರಾಗಿರುವ ಬಗ್ಗೆ ದೃಢೀಕರಣ ಪತ್ರದೊಂದಿಗೆ ಸದಸ್ಯತನ ಹೊಂದಿದ ಸಹಕಾರ ಸಂಘದ ಮುಖಾಂತರ ತಮ್ಮ ವ್ಯಾಪ್ತಿಯ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಉಡುಪಿ/ಕುಂದಾಪುರ) ಇವರ ಕಛೇರಿಗೆ ಸೆಪ್ಟಂಬರ್ 30 ರೊಳಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ ಅವರ ಪ್ರಕಟಣೆ ತಿಳಿಸಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಮೀನುಗಾರರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸೀಡಿಂಗ್ ಮಾಡುವ ಬಗ್ಗೆ:
ಮೀನುಗಾರಿಕೆ ಇಲಾಖೆಯ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆ ಮತ್ತು ಕೋವಿಡ್ ಆರ್ಥಿಕ ಪ್ಯಾಕೇಜ್ ಪರಿಹಾರ ಯೋಜನೆಗಳಿಗೆ, ಫಲಾನುಭವಿಗಳು ಡಿ.ಬಿ.ಟಿ ತಂತ್ರಾಂಶದಲ್ಲಿ ನೋಂದಣಿಯಾಗಬೇಕಾಗಿರುತ್ತದೆ.
ಡಿ.ಬಿ.ಟಿ ತಂತ್ರಾಂಶವು ಆಧಾರ್ ಅವಲಂಬಿತವಾಗಿರುವುದರಿಂದ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸುವುದು ಕಡ್ಡಾಯವಾಗಿದ್ದು, ಸದರಿ ತಂತ್ರಾಂಶದಲ್ಲಿ ಈಗಾಗಲೇ ಸಹಾಯಧನ/ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ವಹಿಸಲಾಗುತ್ತಿದ್ದು, ಅನೇಕ ಫಲಾನುಭವಿಗಳ ಖಾತೆ ಬ್ಯಾಂಕ್ A/c No ಆಧಾರ್ ಲಿಂಕ್ ಆಗದಿರುವುದರಿಂದ ಹಣ ಪಾವತಿಸಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ಈ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗಳಿಗೆ ತೆರಳಿ ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಿಸಲು ಕ್ರಮ ವಹಿಸುವಂತೆ ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ ಅವರ ಪ್ರಕಟಣೆ ತಿಳಿಸಿದೆ.