Kundapra.com ಕುಂದಾಪ್ರ ಡಾಟ್ ಕಾಂ

ಸೇವಾ ಮನೋಭಾವದಿಂದ ಗೋಶಾಲೆ ನಿರ್ವಹಣೆ ಮಾಡಬೇಕು: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಗೋಶಾಲೆಗಳಲ್ಲಿನ ಗೋವುಗಳ ಪಾಲನೆಯನ್ನು ಸೇವಾ ಮನೋಭಾವದಿಂದ ಯಾವುದೇ ಪ್ರತಿಫಲಗಳನ್ನು ಬಯಸದೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದರು.

ಅವರು ತಮ್ಮ ಕಛೇರಿಯಲ್ಲಿ ನಡೆದ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಸರಕಾರ ಜಾನುವಾರು ಹತ್ಯ ಪ್ರತಿಬಂಧಕ ಕಾಯ್ದೆ ಹಾಗೂ ಸಂರಕ್ಷಣೆ ಕಾನೂನು ಜಾರಿಗೆ ತಂದಿದೆ. ಗೋರಕ್ಷಣೆಗಾಗಿ ಸರಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು ಮುಂದಾಗಿದ್ದು ಪ್ರತಿ ಜಿಲ್ಲೆಗೆ ಮೊದಲನೇ ಹಂತದಲ್ಲಿ ೨೪ ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅನೇಕ ದಾನಿಗಳು ಇದ್ದಾರೆ, ಅವರ ಸಹಕಾರ ಹಾಗೂ ಜನರ ಸಹಭಾಗಿತ್ವದೊಂದಿಗೆ ಗೋಶಾಲೆಗಳನ್ನು ನಿರ್ವಹಣೆ ಮಾಡಬೇಕು ಎಂದ ಅವರು ಸರಕಾರ ಪಶುಗಳ ನಿರ್ವಹಣೆಗೆ ದಿನಕ್ಕೆ 17.50 ರೂಗಳನ್ನು ನೀಡಲು ನಿಗದಿಪಡಿಸಿದೆ. ಆದರೆ ಪಶುಗಳ ನಿರ್ವಹಣೆಗೆ ಇದು ಸಾಕಾಗುವುದಿಲ್ಲ ಹೆಚ್ಚಿನ ಅನುದಾನ ಬೇಕು ಎಂಬ ಬಗ್ಗೆ ಸಂಘ ಸಂಸ್ಥೆಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ 2,52,724 ಗೋವುಗಳಿದ್ದು ಅವುಗಳಲ್ಲಿ ಶೇ. 0.75ರಷ್ಟು ಜಾನುವಾರುಗಳಿಗೆ ಅಂದರೆ 2,000 ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಇರುವಂತೆ ಗೋಶಾಲೆಗಳನ್ನು ಜಿಲ್ಲೆಯಲ್ಲಿ ತೆರೆಯಬೇಕು ಎಂದ ಅವರು ಗೋಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಿ ದೈನಂದಿನ ಚಟುವಟಿಕೆಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 2ರಿಂದ ಅಪ್ಲೋಡ್ ಮಾಡಬೇಕು ಎಂದರು.

ಗೋಶಾಲೆಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಕರುಗಳು ಸೇರಿದಂತೆ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಗೋಶಾಲೆಗಳ ಸುಸ್ಥಿರ ನಿರ್ವಹಣೆ ಹಾಗೂ ಸಂಪನ್ಮೂಲ ಕ್ರೂಢಿಕರಣ ಮಾಡಬೇಕು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ ಅದಕ್ಕೂ ಅವಕಾಶ ಕಲ್ಪಿಸಿ ಗೋಶಾಲೆಗಳಲ್ಲಿ ದಾಖಲಾಗಿರುವ ಜಾನುವಾರುಗಳು ಮರಣ ಹೊಂದಿದಲ್ಲಿ ಸ್ಥಳಿಯ ಪಶು ವೈದ್ಯಾಧಿರಿಯಿಂದ ಪ್ರಮಾಣ ಪತ್ರಪಡೆದು ದಾಖಲೆ ಇಡಬೇಕು ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಈಗಾಗಲೆ 12 ಖಾಸಗಿ ಗೋಶಾಲೆಗಳು ದಯಾಪೂರಕವಾಗಿ ಗೋವುಗಳ ಸಂರಕ್ಷಣೆ ಕಾರ್ಯವನ್ನು ನಿರ್ವಹಿಸುತ್ತಿವೆ. ಅವುಗಳಲ್ಲಿ ನೀಲಾವರದ ಗೋವರ್ಧನಗಿರಿ ಟ್ರಸ್ಟ್, ಶಿರೂರಿನ ಅಮೃತಧಾರ ಗೋಶಾಲೆ ಹಾಗೂ ಕಾರ್ಕಳದ ವೆಂಕಟರಮಣ ಗೋಶಾಲೆಗಳಲ್ಲಿ 100ಕ್ಕೂ ಹೆಚ್ಚು ಜಾನುವಾರುಗಳನ್ನು ಕಳೆದ 5 ವರ್ಷದಿಂದ ನಿರ್ವಹಣೆ ಮಾಡುತ್ತಿದೆ ಎಂದರು.

ಹೆದ್ದಾರಿಯ ಅಕ್ಕ-ಪಕ್ಕದಲ್ಲಿ ಹಾಗೂ ಖಾಲಿ ನಿವೇಶನದಲ್ಲಿ ಬೆಳೆದಿರುವ ಹುಲ್ಲನ್ನು ಸಂಗ್ರಹಿಸಿ ಗೋಶಾಲೆಗಳಿಗೆ ತಲುಪಿಸುವ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯತ್ಗಳು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕಾಡು ಪ್ರಾಣಿಗಳಿಂದ ಜಾನುವಾರುಗಳನ್ನು ರಕ್ಷಣೆ ಮಾಡಲು ಆಯ್ದ ಹಾವಳಿ ಇರುವ ಸ್ಥಳಗಳನ್ನು ಗುರುತಿಸಿ ಸೋಲಾರ್ ದೀಪಗಳನ್ನು ಗ್ರಾ. ಪಂ ಗಳು ಹಾಗೂ ಅರಣ್ಯ ಇಲಾಖೆಗಳು ಅಳವಡಿಸುವುದರಿಂದ ಹಾವಳಿ ತಪ್ಪಿಸಬಹುದು ಎಂದ ಅವರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಾರ್ಕಳದ ಅಭಿನಂದನ ಗೋಶಾಲೆಯ ಕೆ. ಮಾದೇವ, ಕುಂದಾಪುರ ತಾಲೂಕಿನ ಶಿರೂರಿನ ನಂದಗೋಕುಲ ಚಾರಿಟೇಬಲ್ ಟ್ರಸ್ಟ್ನ ಸುರೇಶ ಅವಭೃತ, ನೀಲಾವರ ಗೋಶಾಲೆಯ ಟ್ರಸ್ಟಿ ಹಾಗೂ ಪಶು ಪಾಲನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ. ಸರ್ವೋತ್ತಮ ಉಡುಪ, ಕುಮಾರ್ ಕಾಂಚನ್, ಗೋಶಾಲೆಗಳ ನಿರ್ವಹಣೆಯ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ಜಿ.ಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಂಕರ್ ಶೆಟ್ಟಿ, ಪ್ರಾಣಿದಯಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ದೀನಾನಾಥ ವಸಂತ್ ಬಿಜೂರ, ಸುಧೀರ್ ಕಾಂಚನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version