ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮ ಪಂಚಾಯತ್ ಕೊರ್ಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಗಿ ಹಾಗೂ ಕ್ಷಯ ಘಟಕ ಕುಂದಾಪುರ ಇವರ ಆಶ್ರಯದಲ್ಲಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಗ್ರಾಮಕ್ಕಾಗಿ ಸಮುದಾಯದ ಸಹಭಾಗಿತ್ವ ಆಂದೋಲನವನ್ನು
ಹಮ್ಮಿಕೊಳ್ಳಲಾಯಿತು.
ಉಡುಪಿ ಜಿಲ್ಲೆಯ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಚಿದಾನಂದ ಸಂಜು ಅವರ ಮಾರ್ಗದರ್ಶದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರೀಶ್ ಹೆಗ್ಡೆ, ಕ್ಷಯ ರೋಗದ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಬಿಡುಗಡೆ ಮಾಡಿದರು ಮತ್ತು ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳ ಹಾಗೂ ಸಿಬ್ಬಂದಿಗಳ ಆರೋಗ್ಯ ಸೇವೆಯನ್ನು ಶ್ಲಾಘಿಸಿದರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಕಾರ್ಯಕ್ರಮಗಳಿಗೂ ಪಂಚಾಯತ್ ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಕ್ಷಯ ರೋಗದ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ ಸಮುದಾಯದಲ್ಲಿ ಕ್ಷಯ ರೋಗವನ್ನು ನಿಯಂತ್ರಿಸಲು ಮಾಡಬೇಕಾದ ಅನಿವಾರ್ಯತೆ ಮತ್ತು ಕೈಗೊಳ್ಳ ಬೇಕಾದ ಕ್ರಮಗಳನ್ನು ವಿವರಿಸಿದರು ಹಾಗೂ ಭಾರತ ಸರ್ಕಾರದಿಂದ ಕ್ಷಯ ರೋಗದ ಪತ್ತೆಗಾಗಿ ಇರುವ ಉಚಿತ ಪರೀಕ್ಷೆಗಳು , ಉಚಿತ ಚಿಕಿತ್ಸೆ ಹಾಗೂ ಕ್ಷಯ ರೋಗದಿಂದ ಉಂಟಾಗುವ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ನಿಕ್ಷಯ್ ಪೋಷನ್ ಅಭಿಯಾನದ ಮೂಲಕ ರೋಗಿಗೆ ಪ್ರತಿ ತಿಂಗಳು ರೂ 500 ರಂತೆ ಚಿಕಿತ್ಸೆ ಮುಗಿಯುವ ವರೆಗೂ ಅವರ ಉಳಿತಾಯ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದರು
ಹಿರಿಯ ಕ್ಷಯ ರೋಗ ಪ್ರಯೋಗ ಶಾಲಾ ಮೇಲ್ವಿಚಾರಕ ಅಣ್ಣಪ್ಪ, ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞ ವಿನೋದ್, ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರತಾಪ್ ಸ್ವಾಗತಿಸಿದರು ಹಾಗೂ ಕಾರ್ಯಕ್ರಮವನ್ನು ಹಿರಿಯ ಕ್ಷಯ ಚಿಕಿತ್ಸಾ ಮೇಲ್ವಿಚಾರಕ ಗುರುದಾಸ್ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ತಂಡಗಳು ಮುಂದಿನ 3 ದಿನಗಳವರೆಗೆ ಕೊರ್ಗಿ ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಕ್ಷಯ ರೋಗದ ಮಾಹಿತಿಯನ್ನು ನೀಡುವುದರೊಂದಿಗೆ ರೋಗದ ಲಕ್ಷಣಗಳನ್ನು ಹೊಂದಿದವರಿಗೆ ಉಚಿತ ಕಫ ಪರೀಕ್ಷೆಯನ್ನು ಮಾಡಲು ನಿರ್ಣಯಿಸಲಾಯಿತು.