Kundapra.com ಕುಂದಾಪ್ರ ಡಾಟ್ ಕಾಂ

ಮೊಬೈಲ್ ಅಂಗಡಿ ಮಾಲಿಕನ ಅಪಹರಣ, ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಗರದ ಮೊಬೈಲ್ ಎಕ್ಸ್ ಸಂಸ್ಥೆಯ ಮಾಲಕ ಮುಸ್ತಾಫ್ ಅವರ ಅಪಹರಣ ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಕೋಟೇಶ್ವರ ಮೂಲದ ಮುಕ್ತಾರ್ (35) ಹಾಗೂ ಈತನೊಂದಿಗಿದ್ದ ದೆಹಲಿ ಮೂಲದ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ.‌

ಅಂಗಡಿ ವ್ಯವಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮುಸ್ತಾಫ್ ಅವರಿಂದ 4,64,0175 ರೂ. ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ದಾಖಲಾತಿಗಳನ್ನು ಸುಲಿಗೆ ಮಾಡಿ ರಿವಾಲ್ವರ್ ತೋರಿಸಿ ಕಾರಿನಲ್ಲಿ ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು. ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಸಂಬಂಧ ತನಿಖೆ ಕೈಗೆತ್ತಿಕೊಂಡ ಪೊಲೀಸರು‌ ಆರೋಪಿಗಳ ಚಲನವಲನ ಗಮನಿಸಿ ದೆಹಲಿಯಲ್ಲಿ ಇರುವುದನ್ನು ಪತ್ತೆಹಚ್ಚಿ ಅಲ್ಲಿಗೆ ತೆರಳಿದ್ದರು. ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದು ಪೊಲೀಸರು ಸುಮಾರು 1000 ಕಿಲೋಮೀಟರ್ ಹಿಂಬಾಲಿಸಿ ಅಂತಿಮವಾಗಿ ಅಹಮದಾಬಾದ್‌ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶುಕ್ರವಾರ ಕುಂದಾಪುರಕ್ಕೆ ಕರೆತರಲಾಗಿತ್ತು. ಸಂಜೆ ವೇಳೆಗೆ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ. ಸದ್ಯ ಇಬ್ಬರಿಗೆ ನ್ಯಾಯಾಂಗ ಬಂಧನ‌ ವಿಧಿಸಲಾಗಿದೆ. ಇನ್ನು ಉಳಿದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಂತೆ ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಕೊಲ್ಲೂರು ಪಿಎಸ್ಐ ನಾಸೀರ್ ಹುಸೇನ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸತೀಶ್, ಸಚಿನ್, ಮಹಿಳಾ ಹೆಡ್ ಕಾನ್ಸ್‌ಟೇಬಲ್ ಚಂದ್ರವತಿ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.

Exit mobile version