Kundapra.com ಕುಂದಾಪ್ರ ಡಾಟ್ ಕಾಂ

ಬಿರುಗಾಳಿಗೆ ಹೆದ್ದಾರಿ ಮೇಲೆ ಉರುಳಿದ ಮರ, ಮನೆ ತೋಟಗಳಿಗೂ ಹಾನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಅಂಪಾರು ಸಮೀಪದ ಮೂಡುಬಗೆ ಎಂಬಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಬಿರುಗಾಳಿ ಅಬ್ಬರಕ್ಕೆ ಅಪಾರ ಮರಮಟ್ಟುಗಳು ಧರಾಶಾಹಿಗೊಂಡಿದ್ದು ಮನೆ, ದನದ ಕೊಟ್ಟಿಗೆ, ವಿದ್ಯುತ್ ಕಂಬ, ಕೃಷಿತೋಟ ಹಾನಿಗೊಂಡಿದೆ.

ಕುಂದಾಪುರ ಸಿದ್ದಾಪುರ ರಾಜ್ಯ ಹೆದ್ದಾರಿ ಹೋಗುವ ಇಲ್ಲಿ ಮರಗಳು ಹೆದ್ದಾರಿಗೆ ಒರಗಿದ ಪರಿಣಾಮ ಎರಡುವರೆ ತಾಸು ಹೆದ್ದಾರಿ ಬಂದ್ ಆಗಿದ್ದು, ಮೆಸ್ಕಾಂ, ಅರಣ್ಯ ಇಲಾಖೆ, ಪೋಲಿಸರು ಹಾಗೂ ಸ್ಥಳೀಯರು ಹೆದ್ದಾರಿಯಲ್ಲಿನ ಮರಗಳ ತೆರವಿಗೆ ಶ್ರಮಿಸಿದರು.

ಅಡಿಕೆ, ತೆಂಗು, ಮನೆಗಳಿಗೆ ಹಾನಿ:
ಸಿದ್ದಾಪುರ: ಗ್ರಾಮೀಣ ಭಾಗದ ಶಂಕರನಾರಾಯಣ, ಅಂಪಾರು, ಕೊಂಡಳ್ಳಿ, ಶಾನ್ಕಟ್ಟು, ಮೂಡುಬಗೆ, ಗೊರಟೆ, ಕನ್ನಾಲಿ, ಕುಳ್ಳುಂಜೆ ಮುಂತಾದ ಕಡೆ ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಮನೆ, ಅಡಿಕೆ, ತೆಂಗು, ವಿದ್ಯುತ್ ಕಂಬ ಇತ್ಯಾದಿ ಭಾರಿ ಗಾತ್ರದ ಮರಗಳು ಧರೆಗುರುಳಿವೆ.

ಹಠಾತ್ತನೆ ಬೀಸಿದ ಗಾಳಿಗೆ ಸಾವಿರಾರು ಅಡಿಕೆ ತೆಂಗಿನ ಮರಗಳು ಹಾಗೂ ಅಂದಾಜು ೩೦ಕ್ಕೂ ಮಿಕ್ಕಿ ಮನೆಗಳು ಗಾಳಿಯ ಅಬ್ಬರಕ್ಕೆ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಸಿದ್ದಾಪುರ ಕುಂದಾಪುರ ಸಂಪರ್ಕಿಸುವ ಮುಖ್ಯ ರಸ್ತೆ ಮೇಲೆ ವಿದ್ಯುತ್ ಕಂಬ ಮರಗಳು ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು ಬಳಿಕ ತೆರವು ಕಾರ್ಯ ನಡೆಯಿತು. ಅಡಿಕೆ ಕೊಯ್ಲು ಸಮಯ ಸಮೀಪಿಸುತ್ತಿರುವುದರಿಂದ ಗಾಳಿಯ ಅಬ್ಬರಕ್ಕೆ ಸಾವಿರಾರು ಅಡಿಕೆ ತೆಂಗಿನ ಮರಗಳು ನೆಲಕ್ಕುರುಳಿದ್ದು ಕೃಷಿಕರಿಗೆ ನುಂಗಲಾರದ ತುತ್ತಾಗಿದ್ದು ಅಪಾರ ನಷ್ಟ ಸಂಭವಿಸಿದೆ.

Exit mobile version