ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯದಲ್ಲಿ ದಸರಾ ಮುಗಿದ ಕೂಡಲೇ ಅಂದರೆ ಅ.16ರಿಂದಲೇ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಘೋಷಣೆ ಮಾಡಿದ್ದಾರೆ.
ಕುಂದಾಪುರ ಬೋರ್ಡ್ ಹೈಸ್ಕೂಲು ಹಾಗೂ ಉಡುಪಿಯ ಒಳಕಾಡು ನಾರ್ತ್ ಶಾಲೆಗೆ ಬಂದು ಶಾಲೆಯ ವೀಕ್ಷಣೆ ಮಾಡಿದ ಬಳಿಕ ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಝೀರೋ ಇದೆ. ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭವಾಗುತ್ತದೆ. ಜೊತೆಗೆ ದಸರಾ ಮುಗಿದ ತಕ್ಷಣ ಬಿಸಿಊಟ ಕೂಡ ಆರಂಭವಾಗಲಿದೆ. ಸಿಎಂ ಬೊಮ್ಮಾಯಿ ಕೂಡ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಈ ಬಗ್ಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯುತ್ತಾರೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ. ಇನ್ನು ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ ಮುಂದೆಯೂ ಕಡ್ಡಾಯ ಮಾಡುವುದಿಲ್ಲ. ಆನ್ಲೈನ್, ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ ಎಂದು ಸಚಿವ ನಾಗೇಶ್ ಹೇಳಿದರು.
ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ. ದಸರಾದ ಮರುದಿನದಿಂದಲೇ ಎಲ್ಲಾ ಶಾಲೆಗಳಲ್ಲಿ ಬಿಸಿಯೂಟ ಕೂಡ ಆರಂಭವಾಗಲಿದೆ. ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಶಾಲೆಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.