Kundapra.com ಕುಂದಾಪ್ರ ಡಾಟ್ ಕಾಂ

ಚಿತ್ತೂರು ಶಾಲೆಯ ರಂಗಮಂದಿರ ಹಾಗೂ ತರಗತಿ ಕೊಠಡಿಗಳಿಗೆ ಶಂಕುಸ್ಥಾಪನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಕೊರೋನಾ ಕಾರಣದಿಂದ ಸರಕಾರದಿಂದ ಅನುದಾನ ಒದಗಿಸಲು ಸದ್ಯದಮಟ್ಟಿಗೆ ಸಾಧ್ಯವಿಲ್ಲದೇ ಇರುವುದರಿಂದ ದಾನಿಗಳಿಂದ ಕಟ್ಟಡ ನಿರ್ಮಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ನುಡಿದರು.

ಅವರು ಚಿತ್ತೂರು ಸರಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ಅರ್ಚಕ ಶ್ರೀಧರ ಮಂಜ, ಹೈದರಬಾದ್ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಹಾಗೂ ಅರ್ಚಕ ನಾಗರಾಜ ಮಂಜ ಸಹೋದರರು ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿಕೊಡುತ್ತಿರುವ ರಂಗಮಂದಿರ ಹಾಗೂ ೪ ತರಗತಿ ಕೊಠಡಿಗಳಿಗೆ ಶಂಕುಸ್ಥಾಪನೆ ಸಂದರ್ಭ ಮಾತನಾಡಿದರು. ಯಾರೇ ಕೋಟ್ಯಾಂತರ ಹಣ ದುಡಿದರೂ ಅದನ್ನು ಕೊಂಡುಹೋಗಲು ಸಾಧ್ಯವಿಲ್ಲ. ಸಮಾಜಕ್ಕೆ ಅದನ್ನು ದಾನರೂಪದಲ್ಲಿ ಕೊಟ್ಟರೆ ಅದು ಚಿರಸ್ಥಾಯಿಯಾಗಿ ಉಳಿಯಲಿದೆ. ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸಹೋದರರು ಈ ಸತ್ಯ ಅರಿತಿರುವುದರಿಂದ ಶಾಲೆಗಳ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಇವರಂತೆ ಉಳ್ಳವರು ಶಿಕ್ಷಣ ಸಂಸ್ಥೆಗಳಿಗೆ ದಾನ ನೀಡಬೇಕೆಂದರು.

ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟಿನ ಗೌರವಾಧ್ಯಕ್ಷ ಶ್ರೀಧರ ಮಂಜ, ಅಧ್ಯಕ್ಷ ಕೃಷ್ಣಮೂರ್ತಿ ಮಂಜ ಹಾಗೂ ಕಾರ್ಯಾಧ್ಯಕ್ಷ ನಾಗರಾಜ ಮಂಜ ಸಹೋದರರು ಶಂಕು ಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನೆ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಉದಯ ಜಿ.ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ, ನಾರಾಯಣ ಶೆಟ್ಟಿ ಚಿತ್ತೂರು ಕೆಳಾಮನೆ, ಚಿತ್ತೂರು ಸರಕಾರಿ ಪ್ರೌಢಶಾಲಾ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ, ಉದ್ಯಮಿ ರವೀಂದ್ರನಾಥ ಶೆಟ್ಟಿ ಇಡೂರು, ಉಡುಪಿ ಜಿಲ್ಲಾ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ನಾಯ್ಕ, ವಂಡಬಳ್ಳಿ ಜಯರಾಮ ಶೆಟ್ಟಿ, ಅರ್ಚಕ ವಿಘ್ನೇಶ್ವರ ಮಂಜ, ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರ ಶೆಟ್ಟಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಪೂಜಾರಿ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ೩ನೇ ಮೊಕ್ತೇಸರ ಶ್ರೀಧರ ಆಚಾರ್ಯ ಆಲೂರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರದೀಪ್ ಶೆಟ್ಟಿ, ಸುರೇಶ್ ಪೂಜಾರಿ ಚಿತ್ತೂರು, ಅನಿಲ್ ಕುಮಾರ್ ಶೆಟ್ಟಿ ಚಿತ್ತೂರು ಉಪಸ್ಥಿತರಿದ್ದರು. ದಿನಕರ ಉಡುಪರು ಪೌರೋಹಿತ್ಯ ನೆರವೇರಿಸಿದರು. ಮುಖ್ಯ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶಾಲಾ ಶಿಕ್ಷಕ ವೃಂದದವರು ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version