Kundapra.com ಕುಂದಾಪ್ರ ಡಾಟ್ ಕಾಂ

ಪಯಣದ ಸುತ್ತಾ…

ಸಂದೀಪ್ ಶೆಟ್ಟಿ ಹೆಗ್ಗದ್ದೆ

ಮೊನ್ನೆಯಷ್ಟೆ ನಾಲ್ಕೈದು ದಿನಗಳ ರಜೆ ಪಡೆದು ಊರಿನ ಕಡೆ ಪ್ರಯಾಣ ಬೆಳೆಸಿದ್ದೆ. ಊರು ಬಿಟ್ಟು ಬಂದು ಬರೋಬ್ಬರಿ ಮೂರು ವರ್ಷದ ನಂತರ ನನ್ನ ಈ ಪ್ರಯಾಣ ನನ್ನೂರಿಗೆ. ಸ್ವಲ್ಪ ಅದ್ಭುತ, ಸ್ವಲ್ಪ ಕುತೂಹಲದ ನಡುವೆ ಹೋಗುವಾಗಲೇ ಹಳೆಯ ನಮ್ಮ ಹಳ್ಳಿಯ ವೈಖರಿ ನಾವಾಗಾ ಬೆಳೆದಿದ್ದು, ಓದಿದ್ದು, ಎಲ್ಲಾ ನೆನಪು ಮಾಡಿಕೊಂಡೆ. ಅದೇ ಟಾರು, ಅದೇ ರೋಡು, ಅದೇ ಬಿಲ್ಡಿಂಗ್‌ಗಳು, ಅದೇ ಟ್ರಾಫಿಕ್‌ನ ಸಂಧಿಗೊಂದಿ, ಬೇಡದ ನೂಕು ನುಗ್ಗಲು, ಕರುಣೆ ತೋರದ ಜನಗಳು, ಸದಾ ಮಂಡೆಬಿಸಿ ಮಾಡುವ ಓಡಾಟಗಳು… ಇವುಗಳಿಗೆಲ್ಲಾ ಬ್ರೇಕ್ ಹಾಕಿ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ನೆಮ್ಮದಿಯಲ್ಲಿ ಒಂದಿಷ್ಟು ದಿನವಾದರೂ ಆರಾಮಾಗಿ ಸುಖಿಸಿ ಸರಿಯಾದ ನಿದ್ರೆಯ ಜೊತೆಗೆ ಸ್ವಲ್ಪ ಹಳ್ಳಿಯ ಅಂದವನ್ನು ಸವಿದುಕೊಂಡು ಬರೋಣವೆಂದು ಹೊರಟಿದ್ದೆ.

ಈಗೆಲ್ಲಾ ಮನೆಯ ಹತ್ತಿರವೇ ಬಸ್ಸು ಹೋಗುವುದರಿಂದ ಮೊದಲಿನ ರೀತಿ ಮೈನ್ ರೋಡ್‌ನಲ್ಲಿ ಬಸ್ಸಿಳಿದು, ಬಳಿಕ ಕೈಲಿರುವ ಭಾರದ ಬ್ಯಾಗನ್ನು ಹಿಡಿದುಕೊಂಡು ಎತ್ತಿನ ಗಾಡಿಯೋ, ಜೀಪನ್ನೋ ಬಳಸಿಕೊಂಡು, ಅದಾದ ನಂತರ ಇನ್ನರ್ಧ ಕಿಲೋ ಮೀಟರ್ ನಡೆದು ಸುಸ್ತಾಗಿ ’ಇಲ್ಲಿಗೆ ಬರೋದಂದ್ರೆ ಇದೇ ರಗಳೆನಪ್ಪಾ’ ಎನ್ನುವಾ ತಗಾದೆಯ ಮಾತೆ ಇರಲಿಲ್ಲ. ಅಂತೂ-ಇಂತೂ ಆ ಊರಿನಲ್ಲಿ ಹತ್ತಿದ ಬಂಡಿ ನಮ್ಮೂರಿಗೆ ನನ್ನ ಸೇಪ್ ಆಗಿ ಕರೆದುಕೊಂಡು ಬಂದು ಇಳಿಸಿ, ಅದರ ಪಾಡಿಗೆ ನನ್ನ ಪಯಣ ಇನ್ನೂ ಮುಂದಕ್ಕಿದೆ ಎನ್ನುವಂತೆ ಇನ್ನೊಂದೂರಿಗೆ ಪ್ರಯಾಣ ಬೆಳೆಸಿತು. ಬಸ್ಸಿಂದ ಇಳಿದ ನಂತರ ಒಂದು ನಿಮಿಷ ಸೈಲೆಂಟ್ ಆಗಿ ಆಚೆ-ಇಚೆ ನೋಡಿದವನಿಗೆ ನಾನು ನಮ್ಮೂರಿಗೆ ಬಂದಿದ್ದೀನಾ!? ಆಥವಾ ಬೇರೆಲ್ಲಾದರೂ ಬಂದು ಇಳಿದೆನಾ!? ಎಂಬ ಪ್ರಶ್ನೆ ಮೂಡಿತು. ನಾ ಈ ಊರನ್ನು ಬಿಟ್ಟು ಹೋಗುವ ದಿನ ಈ ಊರು ಎಷ್ಟು ಹಸಿರಿನಿಂದ ಕೂಡಿತ್ತು. ಎಲ್ಲಿ ನೋಡಿದರೂ ಮರ-ಗಿಡ, ಪಶು-ಪಕ್ಷಿಗಳ ಕಲರವ, ಮಕ್ಕಳ ಆಟ-ಓಟ, ಹೀಗೆ ಎಲ್ಲವೂ ನೈಜ ಬದುಕಲ್ಲಿ ತನ್ನದೇ ಆದ ಸಂತೋಷವನ್ನು ನೀಡುವ ಪಾರ್ಟನರ್ ಆಗಿ ಕಾಣುತ್ತಿತ್ತು. ಆದರೆ ಇಂದು ಎಲ್ಲವೂ ಬದಲಾಗಿದೆ! ಅಂದಿದ್ದ ಕೆಂಪು ರಸ್ತೆಗೆ ಡಾಂಬರ್‌ನ ಕವಚ ಬಂದಿದೆ. ನಡುವೆ ಎರಡೂ ಕಡೆ ಚರಂಡಿಯ ವೈಭವ ಬೇರೆ. ಏನಾಶ್ಚರ್ಯ!! ನಾನಂದುಕೊಂಡು ಬಂದ ಊರು ಇದಲ್ಲವಾದರೂ, ನಾನು ಹುಟ್ಟಿ ಬೆಳೆದ ಊರು ಇದೇನೆ. ಅಷ್ಟೊಂದಿದ್ದ ಮರಗಳು ಇಷ್ಟಾಗಿವೆ. ಇಷ್ಟಿದ್ದ ವೈಖರಿಗಳು ಏನೂ ಇಲ್ಲದಾಗಿವೆ… ಇದನ್ನು ಬದಲಾವಣೆ ಎನ್ನಲೋ, ನಾವೇ ನಮ್ಮ ತನವನ್ನು ಹಾಳುಗೆಡವಿಗೊಳ್ಳಲು ಆಹ್ವಾನಿಸಿದ ದಾರಿಹೋಕನ ಕಾಟ ಎನ್ನಲೋ!? ತಿಳಿಯುತ್ತಿಲ್ಲ.

ಅಯ್ಯೋ ಸುಮ್ಮನಿರು ಮನವೇ ಡಿಲ್ಲಿಯಿಂದ ಹಳ್ಳಿಗೆ ಬಂದರೂ ನಿನ್ನ ವಿಮರ್ಶೆ ಬುದ್ಧಿ ಬದಲಾಗಿಲ್ಲವಲ್ಲಾ, ಅದೆಲ್ಲಾ ಈಗ್ಯಾಕೆ ನೀ ಬಂದಿರೋದು ಆರಾಮಾಗಿ ಇದ್ದು ಹೋಗೋಕೆ. ಅಷ್ಟಕ್ಕೂ ಇಷ್ಟು ದಿನ ಊರಿನ ಮೇಲೆ ಇಲ್ಲದ ಈ ಪ್ರೀತಿ ಈಗ್ಯಾತಕೆ ಎಂದು ನನ್ನ ಮನಕ್ಕೆ ನಾನೇ ಬೈದುಕೊಂಡೆ. ಸುಮ್ಮನೆ ಈ ಆಲೋಚನೆಗಳಿಗೆಲ್ಲಾ ವಿರಾಮವಿತ್ತು ಮನೆ ಕಡೆ ಹೆಜ್ಜೆ ಹಾಕಿದರೂ ನಾವು ಬೆಳೆದ ಪರಿಸರ, ಆಗಿನ ನಮ್ಮ ಬಾಲ್ಯ, ಜೀವನದ ಆಗುಹೋಗು, ಚಿಕ್ಕವಯಸ್ಸಲ್ಲಿ ನಾವು ಎಂಜಾಯ್ ಮಾಡುತ್ತಿದ್ದ ಮನೆಯಾಟ ಇತ್ಯಾದಿಗಳು ತುಂಬಾನೆ ನೆನಪಾಗಿ ಕಾಡತೊಡಗಿದವು. ಯಾವುದೇ ವ್ಯಕ್ತಿಗೆ ಹಳೆಯ ನೆನಪು ಹೇಗೆ ಅವಿಸ್ಮರಣೀಯ ಅವರ್ಣನೀಯವೋ, ಹಾಗೆಯೆ ಪ್ರಸ್ತುತ ಜೀವನದೊಂದಿಗೆ ಹಳೆಯ ನನಪು ಮತ್ತೆ ನೆನೆಗುದಿಗೆ ಬಂದು ಸಾಕಾರವಾಗಿ ಅದ್ಭುತ ಅನುಭವವನ್ನು ನೀಡುವುದು ಒಂಥರ ಮನಸ್ಸಿನ ಮೂಲೆಗೆ ಸಿಹಿಯ ಸಿಂಚನ.

ಎಸ್.., ಅದು ನಮ್ಮ ಬಾಲ್ಯ. ಬಾಲ್ಯವೆ೦ಬ ಮಧುರ ನೆನಪುಗಳ ಕಣಜವನ್ನೊಮ್ಮೆ ಬಗ್ಗಿ ನೋಡಿದಾಗ, ಎಷ್ಟೆಲ್ಲಾ ಮನೋಹರ ದೃಶ್ಯಗಳು ಕಾಣಸಿಗುತ್ತವೆ. ಅದೊಂದು ಕಶ್ಮಲವಿಲ್ಲದ ಜಗತ್ತು. ಚಿಕ್ಕ ವಯಸ್ಸಿನಿಂದ ಹಿಡಿದು ಬೆಳೆದು ದೊಡ್ಡವರಾಗುವವರೆಗೂ ನಾವು ಕಂಡ ಜೀವನದ ಅದ್ಭುತಗಳೇ ಇಂದು ಎಷ್ಟೇ ಆಧುನೀಕರಣಕ್ಕೆ ಒಳಗಾದರೂ ಮರೆಯಲಾಗದ ಅನುಭವ ನೀಡುತ್ತವೆ. ಇಂದು ಹಣ ಮಾಡಬೇಕು, ಎಂದು ಬೇರೆ ಊರಿಗೆ ಹೋಗುವ ನಾವು ಬಗೆ ಬಗೆಯಲ್ಲಿ ಪ್ರತಿದಿನವೆನ್ನದೇ ಹೋರಾಡುತ್ತಲೇ ಬದುಕುತ್ತವೆ. ಎಲ್ಲವನ್ನೂ ಮರೆಯುತ್ತೇವೆ. ಆದರೆ ಕಷ್ಟದ ಸಂಧರ್ಭ ಬಂದಾಗ ಇಲ್ಲಿನ ಸಹವಾಸ ಸಾಕು ಊರಿಗೆ ಹೋಗಿ ಇದ್ದು ಬಿಡೋಣವೆಂದುಕೊಳ್ಳುತ್ತೇವೆ. ಇದೇ ಅಲ್ವಾ ಹುಟ್ಟೂರಿನ ಮಹಿಮೆ. ಅಲ್ಲಿ ಏನಿತ್ತೋ ಎನಿಲ್ವೋ ಆದರೆ ಸಂಭ್ರಮ ಇತ್ತು ಜೊತೆಗೆ ಪ್ರೀತಿ ಇತ್ತು. ಬೆಳಿಗ್ಗೆ ಎದ್ದು, ಗದ್ದೆ-ತೋಟದ ಕಡೆ ಪಯಣಿಸಿ ಸಣ್ಣ ಪುಟ್ಟ ಕೆಲಸ ಮಾಡಿ ಆನಂತರವೇ ಶಾಲೆಗೆ ಹೋಗುವುದು, ಅಲ್ಲಿಂದ ಮನೆಗೆ ಬಂದು ಮತ್ತೆ ಆಟ ಆಟಲು ಹೊರಡುವುದು ಹೀಗೆ ಎಲ್ಲವೂ ಒಂದು ಮಜಾ. ಸುಮಾರು ಮೈಲಿಗಳಷ್ಟು ದೂರವಿರುವ ಒಂದೇ ಶಾಲೆಗೆ, ಹೋಗುವ ದಾರಿಯಂತೂ ಕಲ್ಲು ಬೆಟ್ಟಗಳ ಮೇಲೆ ಇತ್ತು. ಅಲ್ಲಲ್ಲೇ ಆಟ, ಅಲ್ಲಲ್ಲೇ ಜಗಳ, ಬಡಿದಾಟ, ಮದ್ಯಾಹ್ನದ ಮೇಲೆ ಕುಂಟೆ ಬಿಲ್ಲೆಯೊ, ಲಗೋರಿಯೋ. ಚೀನಿ ಆಟವೋ ಮತ್ಯಾವುದೋ ಆಡುತ್ತಾ ಕಾಲ ಕಳೆಯುತ್ತಿದ್ದದ್ದೂ, ಹೀಗೆ ಎಲ್ಲವೂ ಅದ್ಭುತ ಏನಿಸುತ್ತದೆ. ಈಗಲೂ ಸಂಜೆ ಸಮಯದಲ್ಲಿ ಕಣ್ಮುಚ್ಚಿ ನೆನೆದುಕೊಂಡರೆ ಆ ಸಮಯದ ಎಲ್ಲವೂ ನೆನಪಿಗೆ ಬಂದು ಮೈ ರೋಮಾಂಚನಗೊಳಿಸುತ್ತವೆ.

ಅಂತೂ ಹಲವು ದಿನಗಳ ಬಳಿಕ ಮನೆ ಸೇರಿದ ನನಗೆ ತಾಯಿ ಪ್ರೀತಿಯೊಂದು ಮೊದಲಿನಂತೆ ಸಿಕ್ಕಿದ್ದು ಬಿಟ್ಟರೆ ಬೇರೆನೂ ಮೊದಲಿನ ರೀತಿಯಲ್ಲಿ ಕಾಣಲು ಸಾಧ್ಯವಾಗಲಿಲ್ಲ. ಎಲ್ಲವೂ ಕೂಡ ಚೆಂಜ್ ಚೆಂಜ್.. ಎಲ್ಲಿಯವರೆಗೆ ಹೊಸತನಕ್ಕೆ ಹಾಸುಹೊಕ್ಕಾಗಿದ್ದೇವೆ ಎಂದರೆ ಮೊದಲೆಲ್ಲಾ ದೂರದೂರಿಂದ ಮನೆಗ್ಯಾರಾದರೂ ಬರುತ್ತಾರೆ ಎಂದರೆ ಬಾಗಿಲ ಬಳಿಯೇ ನಿಂತು ಕಾಯುತ್ತಾ ಕುಳಿತಿರುತ್ತಿದ್ದೆವು ನಾವು. ಅದರೆ ಇಂದು ಮನೆಬಾಗಿಲಿಗೆ ಧಾವಿಸಿದರೂ ಕುಳಿತುಕೊಳ್ಳಿ ಕೊನೆಯ ಒಂದು ಎಪಿಸೊಡ್ ಇದೆ ನೊಡ್ಕೋತೀವಿ ಆಮೇಲೆ ಮಾತಾಡೋಣ ಎಂದು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತು ಮನೆಗೆ ಬಂದವರನ್ನೇ ಮರೆಯುತ್ತಾರೆ. ಮಕ್ಕಳಂತೂ ಹೊರಗಿನ ಆಟವನ್ನೇ ನೋಡಿಲ್ಲ. ನಾವು ಕಾಣದ ಹೊಸ ಬಗೆಯ ಆಟವನ್ನು ಮೊಬೈಲ್, ಕಂಪ್ಯೂಟರ್‌ನಲ್ಲೇ ಆಡಿ ನಾವೇ ಜಾಣರು ಎನಿಸಿಕೊಳ್ಳುತ್ತಿದ್ದಾರೆ. ಇನ್ನೂ ಪ್ರಕೃತಿಯ ವಿಚಾರಕ್ಕೆ ಬಂದರೆ ಆಧುನಿಕತೆಯ ಗುಂಗು ಪರಿಸರದ ಮೇಲೆ ಅತಿಕ್ರಮಣ ನಡೆಸಿದೆ. ಮೊದಲಿದ್ದ ಕಾಡು ಇಗಿಲ್ಲದಾಗಿದೆ. ಒಟ್ಟಿನಲ್ಲಿ ಬದಲಾವಣೆಯ ಸೊಂಕು ಎಲ್ಲೆಡೆಯೂ ಪಸರಿಸಿ ನಮ್ಮೂರಿಗೆ ವಿಶಿಷ್ಟ ಲೇಪನ ಕೊಟ್ಟಿರೋದು ಸುಳ್ಳಲ್ಲ. ಇನ್ನೂ ಜಾನಪದೀಯಾಚರಣೆಗಳು ಅಷ್ಟಕಷ್ಟೆ ಎಂಬಂತೆ ಮನೆಯಿಂದ ಹೊರಹೋಗಲು ಬಾಗಿಲ ಬಳಿ ಬಂದು ನಿಂತಿದೆ. ಕಳುಹಿಸಿ ಕೊಡಲು ಜನರಂತೂ ಅಳುಕಿಲ್ಲದೆ ಮಾತಾಡುತ್ತಿದ್ದಾರೆ. ಎಲ್ಲಿಯ ಬದುಕು ಎಲ್ಲಿಗೆ ಸಾಗಿದೆ ಆಲ್ಲವಾ? ಹೀಗೆ ಜೀವನದಲ್ಲಿ ಪ್ರತಿಯೊಂದು ಬದಲಾವಣೆ ಕಂಡಿರುವ ನನ್ನೂರನ್ನು ಕಂಡು ಖುಷಿ ಎಷ್ಟಾಯಿತೋ ನಾ ತಿಳಿಯೇ ಆದರೆ, ನೋವಂತೂ ತುಂಬಾ ಆಯ್ತು. ಹೊಲ ಗದ್ದೆಗಳನ್ನು ನೋಡೋಣವೆಂದು ಬಯಲಿನ ಕಡೆ ಸಾಗಿದರೆ ಎಲ್ಲಾ ಗದ್ದೆಗಳು ಮರುಭೂಮಿಯಂತೆ ಬರಡಾಗಿ ಬಿದ್ದದ್ದವು. ಯಾಕೆ ಯಾರೂ ಕೃಷಿ ಮಾಡಿಲ್ಲವೆಂದು ತಂದೆಯನ್ನು ಕೇಳಿದರೆ ಎಲ್ಲರ ಮನೆ ಮಕ್ಕಳು ಕಲಿತು ದೊಡ್ಡವರಾಗಿ ನಿನ್ನಂತೆ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾರೆ. ತಿಂಗಳು ತಿಂಗಳಿಗೆ ಹಣ ಕಳುಹಿಸುತ್ತಾರೆ. ಆ ಹಣದಿಂದ ಇವರೆಲ್ಲಾ ಆರಾಮಾಗಿ ಇದ್ದಾರೆ. ಈ ಕಷ್ಟ ಯಾರಿಗೂ ಬೇಡದಾಗಿದೆ. ಅದರಿಂದ ಎಲ್ಲರೂ ಈ ಕೃಷಿಯನ್ನೇ ಮರೆತಿದ್ದಾರೆ. ನಾನಾದರೂ ಮಾಡೋಣ ಎಂದರೆ ನನ್ನ ಗದ್ದೆಯೊಂದರಲ್ಲೇ ಕೃಷಿ ಮಾಡಿದರೆ ಕಾಡು ಪ್ರಾಣಿಗಳ ಹಾವಳಿ. ಕಾರ್ಖಾನೆ ಕೆಲಸದಿಂದ ಕೃಷಿ ಕೆಲಸಕ್ಕೆ ಜನವಂತೂ ಮೊದಲೇ ಸಿಗುತ್ತಾ ಇಲ್ಲಾ. ಇನ್ನೂ ಇದನ್ನೆಲ್ಲಾ ಮಾಡೋಕಾಗಲ್ಲ ಕಷ್ಟವಿದೆ ಎಂದರು. ನನಗೂ ಹೌದು ಎನಿಸಿತು. ಆದರೂ ನಮ್ಮ ದೇಶ ಸದೃಡವಾಗಿರುವುದೇ ಕೃಷಿಯಿಂದ ಅದನ್ನು ಮಾಡುವ ರೈತರಿಂದ. ಅದಕ್ಕೆ ಇಂತ ಗತಿ ಬಂದರೆ ಮುಂದೆ ಹೇಗೆ ಎನ್ನುವ ಭಯ ಕಾಡಿತು. ಬದಲಾವಣೆ ಒಳ್ಳೆಯದು ಅದರೆ ಅದು ಮುಂದೆ..!????

ಆಧುನೀಕರಣ, ನಗರೀಕರಣ ಮತ್ತು ಕೈಗಾರೀಕರಣಗಳ ಭರಾಟೆಯ ಓಟಕ್ಕೆ ಸಿಲುಕಿ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ಥಂಭವಾಗಿದ್ದ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಈಗ ಹಳೆಯ ಸಂಸ್ಕೃತಿಗಳು ಅಪರೂಪಕ್ಕೆ ಮರುಭೂಮಿಯಲ್ಲಿ ಕಾಣಿಸುವ ಓಯಸಿಸ್‌ನಂತಾಗಿವೆ. ಇವುಗಳ ಅಬ್ಬರದಲ್ಲಿ ಭಾರತೀಯ ಸಂಸ್ಕೃತಿಯ ನೈಜತೆ ಬದಲಾದದ್ದು ವಿಶೇಷ ಅನ್ನಿಸಲಿಲ್ಲ… ಏನಾದರಾಗಲಿ, ಆಧುನಿಕತೆಯ ವ್ಯಾಮೋಹದಲ್ಲಿ ನಮ್ಮ ತನವನ್ನು ನಾವು ಮರೆಯಬಾರದು. ಹಾಗೆ ಮರೆತರೆ ನಮ್ಮ ಹಳ್ಳಿಗೂ ಸಿಟಿಯ ಜನರಿಗೂ ಇರುವ ವ್ಯತ್ಯಾಸದಲ್ಲಿ ಯಾವ ಬದಲಾವಣೆಯೂ ಇರಲು ಸಾಧ್ಯವಿಲ್ಲ. ಅಂತೂ ಈ ಹಳೆಯ ಇಂದಿನ ವಿಮರ್ಶೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ನಾಲ್ಕು ದಿನ ರಜೆ ಕಳೆದು ಮತ್ತೆ ಜೀವನದ ಬೇಳೆ ಬೇಯಿಸಲು ಮಹಾನಗರಿಯತ್ತ ಹೊರಟೆ. ಹೊರಡುವ ಮುಂಚೆ ಒಂದಲ್ಲ ಒಂದು ದಿನ ನಾನು ವಾಪಾಸಾಗಿ ಮತ್ತೆ ಇಲ್ಲಿಗೆ ಬರಬೇಕು. ಕೃಷಿ ಮತ್ತು ಸಂಸ್ಕೃತಿಗಾಗಿ ನನ್ನ ಜೀವನ ಮುಡಿಪಾಗಿಡಬೇಕು ಎಂದು ಸಂಕಲ್ಪಿಸಿದೆ.

Exit mobile version