Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ದೇವಾಡಿಗ ಸಂಘದಿಂದ ಪುಸ್ತಕ ವಿತರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಾನು ಎನ್ನುವುದು ಅಹಂಕಾರದ ಸಂಕೇತ. ಮುಖ್ಯವಾಗಿ ಸಂಘಟನೆಗೆ ಅದು ಮಾರಕ ಮತ್ತು ವರ್ಜ್ಯವಾಗಿ ನಾವು ಎಂಬ ಪದ ಬಳಕೆಯಲ್ಲಿರಬೇಕು ಎಂದು ಬಾರಕೂರಿನ ಏಕನಾಥೇಶ್ವರಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಅಣ್ಣಯ್ಯ ಶೇರಿಗಾರ್ ಹೇಳಿದರು.

ಮರವಂತೆ ದೇವಾಡಿಗ ಸಂಘದ ಆಶ್ರಯದಲ್ಲಿ ಇಲ್ಲಿನ ನೀರೋಣಿ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದುಳಿದ ದೇವಾಡಿಗ ಸಮುದಾಯವು ಸಮಾಜದ ಪ್ರಧಾನ ವಾಹಿನಿಗೆ ಬರಬೇಕಾದರೆ ಅದರ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು. ಅದಕ್ಕೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಹೊಣೆಯನ್ನು ಸಂಘಟನೆ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಅರಣ್ಯ ಇಲಾಖೆಯ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ರಘುರಾಮ ದೇವಾಡಿಗ ಆಲೂರು ಕಾರ್ಯಕ್ರಮ ಉದ್ಘಾಟಿಸಿದರು. ಕೋಶಾಧಿಕಾರಿ ಹರೀಶ ದೇವಾಡಿಗ ಸ್ವಾಗತಿಸಿದರು. ಗೌರವಾಧ್ಯಕ್ಷ ನಾರಾಯಣ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ್ ದೇವಾಡಿಗ ವಂದಿಸಿದರು. ಗೋಪಾಲ ದೇವಾಡಿಗ ನಿರೂಪಿಸಿದರು.

ಸಮುದಾಯದ ಎಲ್ಲ ವಿದ್ಯಾರ್ಥಿಳಿಗೆ ನೋಟ್ ಪುಸ್ತಕ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಣ್ಣಯ್ಯ ಶೇರಿಗಾರ್ ಮತ್ತು ಸಮಾಜ ಸೇವೆಗೆ ಹಿರಿಯ ನಾಗರಿಕ ರಾಜ್ಯ ಪುರಸ್ಕಾರ ಪಡೆದ ಎಸ್. ಜನಾರ್ದನ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೌರಿ ದೇವಾಡಿಗ, ಕದಂ ದುಬೈ ಸಂಘಟನೆಯ ಗೌರವಾಧ್ಯಕ್ಷ ಶೀನ ದೇವಾಡಿಗ ಕುಳ್ಳಿಮನೆ, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ ದೇವಾಡಿಗ, ಸಂಘದ ಅಧ್ಯಕ್ಷ ಗಿರೀಶ ದೇವಾಡಿಗ, ಉಪಾಧ್ಯಕ್ಷೆ ಗೀತಾ ದೇವಾಡಿಗ, ಕಾರ್ಯದರ್ಶಿ ಶಿವರಾಮ ದೇವಾಡಿಗ, ಜೊತೆ ಕಾರ್ಯದರ್ಶಿ ನಾಗೇಂದ್ರ ದೇವಾಡಿಗ, ಜೊತೆ ಕೋಶಾಧಿಕಾರಿ ಶೋಭಾ ದೇವಾಡಿಗ ಇದ್ದರು.

Exit mobile version