ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಧರ್ಮಸ್ಥಳ ವತಿಯಿಂದ ನೂತನವಾಗಿ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಅಸೋಡು-ಬಂಡ್ಸಾಲೆಯಲ್ಲಿ ಆರಂಭಿಸಿದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ಅನಿಶ್ಚಿತತೆಯಿಂದ ರೈತರಿಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅನಗತ್ಯ ಖರ್ಚಿಗೆ ನಿಯಂತ್ರಣ, ಕೃಷಿಯಲ್ಲಿ ಸುಧಾರಿತ ಪದ್ದತಿ, ಯಂತ್ರೋಪಕರಣಗಳ ಸಮರ್ಪಕ ಬಳಕೆಯಿಂದ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯವಿದೆ. ಕೊರೋನಾದಂತಹ ಸಂದಿಗ್ದತೆ ಎರಡು ವರ್ಷ ಕಾಡಿದರೂ ಕೂಡ ಅನ್ನದಾತ ಕರ್ಮಯೋಗ ಬಿಡಲಿಲ್ಲ. ಹಾಗಾಗಿ ಆಹಾರದ ಸಮಸ್ಯೆ ಕಾಡಲಿಲ್ಲ. ರೈತ ಈ ಸಂದರ್ಭದಲ್ಲಿ ತಟಸ್ಥನಾಗಿರುತ್ತಿದ್ದರೆ ಕೊರೋನಾಕ್ಕಿಂತ ಹೆಚ್ಚು ಸಾವು ಆಹಾರವಿಲ್ಲದೇ ಸಂಭವಿಸುತ್ತಿತ್ತು. ಹಾಗಾಗಿ ಕೃಷಿ ಅವಲಂಬಿತರನ್ನು ಇನ್ನಷ್ಟು ಉತ್ತೇಜಿಸುವ ಕೆಲಸ ಆಗಬೇಕು. ಭರವಸೆ ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕೃಷಿಯಲ್ಲಿ ಇವತ್ತು ಅನಗತ್ಯವಾದ ಖರ್ಚು ಹೆಚ್ಚಳವಾದ್ದರಿಂದ ಲಾಭಾಂಶ ಕಡಿಮೆಯಾಗುತ್ತಿದೆ. ಆದಾಯ ಹೆಚ್ಚಳ ಮಾಡುವ ಬಗ್ಗೆ ಚಿಂತನೆಗಳು ಆಗಬೇಕಿದೆ. ಇವತ್ತು ಕಾರ್ಮಿಕರ ಸಮಸ್ಯೆಗೆ ಪರಿಹಾರವಾಗಿ ಯಂತ್ರೋಪಕರಣಗಳ ಬಳಕೆ ಮಾಡಬಹುದು. ಸಣ್ಣ ರೈತರು ಮಧ್ಯಮ ರೈತರ ಅನುಕೂಲಕ್ಕಾಗಿ ಬಾಡಿಗೆ ಸೇವಾ ಕೇಂದ್ರಗಳ ಆರಂಭಿಸಲಾಗಿದೆ. ಇದು ಲಾಭದ ದೃಷ್ಟಿಕೋನದಿಂದಲ್ಲ. ರೈತರಿಗೆ ಅನುಕೂಲವಾಗಬೇಕು, ಹತ್ತಿರದಲ್ಲಿಯೇ ಕೃಷಿ ಯಂತ್ರಗಳು ಸಿಗಬೇಕು ಎನ್ನುವ ನೆಲೆಯಿಂದ ಎಂದರು.
ಧ.ಗ್ರಾ ಯೋಜನೆಯಿಂದ 164 ಬಾಡಿಗೆ ಕೇಂದ್ರಗಳಿವೆ. 50% ಕೇಂದ್ರಗಳು ಮಾತ್ರ ಲಾಭದಲ್ಲಿವೆ. ರೈತರ ಅಭ್ಯುದಯದ ದೃಷ್ಟಿಯಿಂದ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಯೋಜನಾಬದ್ದವಾದ ಕಾರ್ಯಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು. ಆಯಾಯ ಪ್ರದೇಶದ ಋತುಮಾನ ಆಧಾರಿತ ಬೆಳೆಗಳನ್ನು ನೋಡಿಕೊಂಡು ಯಂತ್ರಗಳನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಇದರಿಂದ ವರ್ಷವಿಡಿ ಯಂತ್ರಗಳಿಗೂ ಕೆಲಸ ಸಿಗುತ್ತದೆ ಎಂದರು.
ಗ್ರಾಹಕ ಸೇವಾ ಕೇಂದ್ರ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಇವತ್ತು ರೈತ ಬೆಳೆದ ಭತ್ತ ಗೋಡೌನ್ಗೆ ಹೋಗುತ್ತಿಲ್ಲ. ಗದ್ದೆಯಿಂದ ನೇರವಾಗಿ ಮಿಲ್ಗಳಿಗೆ ಹೋಗುತ್ತಿದೆ. ರೈತರಿಗೆ ಬೆಂಬಲ ಬೆಲೆ ಸಿಗುವುದಿಲ್ಲ. ಹಾಗಾಗಿ ಸರ್ಕಾರ ಭತ್ತ ಬೆಳೆಗಾರರನ್ನು ಉತ್ತೇಜಿಸಲು ಗದ್ದೆಯಲ್ಲಿಯೇ ಬೆಂಬಲ ಬೆಲೆ ನೀಡುವ ವ್ಯವಸ್ಥೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಜನಜಾಗೃತಿ ವೇದಿಕೆ ಕುಂದಾಪುರದ ಸ್ಥಾಪಕ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಳಾವರ ಗ್ರಾ.ಪಂ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಜೆ. ಮಾಡ, ಸುಜಿತ್ ಕುಮಾರ್ ಶೆಟ್ಟಿ, ಕರಾವಳಿ ಪ್ರಾದೇಶಿಕ ಕಛೇರಿಯ ನಿರ್ದೇಶಕ ವಸಂತ ಸಾಲ್ಯಾನ್ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಶ್ಮಿ ಪ್ರಾರ್ಥನೆ ಮಾಡಿದರು. ಕೃಷಿ ಯಂತ್ರೋಪಕರಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಅಬ್ರಾಹಂ ಎಂ.ಕೆ ಸ್ವಾಗತಿಸಿದರು. ಕುಂದಾಪುರ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಸಿ.ಎಚ್,ಎಸ್.ಸಿ ಮಧ್ಯಮ ವಲಯ ಶಿವಮೊಗ್ಗ ಇದರ ನಿರ್ದೇಶಕರಾದ ದಿನೇಶ್ ಎ ವಂದಿಸಿದರು.