Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ನಗರದಿಂದ ಫ್ಲೈ ಓವರ್‌ಗೆ ಪ್ರವೇಶ – ನಿರ್ಗಮನಕ್ಕೆ ಅವಕಾಶಕ್ಕೆ 30ರೊಳಗೆ ಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಬೊಬ್ಬರ್ಯನಕಟ್ಟೆ ಜಂಕ್ಷನ್‌ನಲ್ಲಿ ಫ್ಲೈ ಓವರ್‌ಗೆ ಪ್ರವೇಶ ಮತ್ತು ನಿರ್ಗಮನ ನೀಡುವ ವಿಚಾರದಲ್ಲಿ ಅ.30ರೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅ.13ರಂದು ಇಲ್ಲಿನ ಪುರಸಭೆ ಸದಸ್ಯರ ನಿಯೋಗ ಉಡುಪಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಬೊಬ್ಬರ್ಯನಕಟ್ಟೆ ಜಂಕ್ಷನ್ ಮುಚ್ಚುಗಡೆಯಿಂದ ಕುಂದಾಪುರ ನಗರ ಪ್ರವೇಶ – ನಿರ್ಗಮನ ಕೊಂಡಿ ಕಳಚಿ ಹೋಗಿದ್ದು ಕೂಡಲೇ ಜಂಕ್ಷನ್ ತೆರವಿಗೆ ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದರು.

ಜಂಕ್ಷನ್ ಮುಚ್ಚುಗಡೆಯಿಂದ ಆಗುತ್ತಿರುವ ತೊಂದರೆ ಮತ್ತು 14ಕ್ಕೂ ಮಿಕ್ಕಿ ಸರಕಾರಿ ಕಚೇರಿಗಳು, ಮೂರು ವಾರ್ಡ್‌ನ ಜನರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸ್ಥಳದ ಬಗ್ಗೆ ತನಿಖೆ ನಡೆಸಿದ ಉಡುಪಿ ಡಿಸಿ ಸಮಿತಿ ರಚಿಸಿ ಅ.೩೦ರೊಗಳಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಆದೇಶದಲ್ಲೇನಿದೆ?: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ಫ್ಲೈ ಓವರ್‌ಗೆ ಪ್ರವೇಶ ನಿರ್ಗಮನಕ್ಕೆ ಅವಕಾಶ ನೀಡುವ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಅಹವಾಲುಗಳು ಸಲ್ಲಿಕೆಯಾಗಿದ್ದು, ಪತ್ರಿಕೆ ಸಾಮಾಜಿಕ ಜಾಲತಾಣದಲ್ಲೂ ಅವಕಾಶ ನೀಡುವ ಬಗ್ಗೆ ಆಗ್ರಹ ಕೇಳಿಬಂದಿರುವ ಹಿನ್ನಲೆಯಲ್ಲಿ ಅ.15ರಂದು ಸ್ಥಳ ತನಿಖೆ ನಡೆಸಲಾಗಿದೆ. ವಾಸ್ತವವಾಗಿ ಪರಿಶೀಲಸಿದಾಗ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಮತ್ತು ಕುಂದಾಪುರ ಪೇಟೆಗೆ ಸಂಪರ್ಕವಿಲ್ಲದೆ ತೊಂದರೆಯಾಗುತ್ತಿರುವುದು ಕಂಡುಬಂದಿದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಂಪರ್ಕ ಸಾಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಸಮಸ್ಯೆಯನ್ನು ಬಗೆಹರಿಸಿ ರಾಷ್ಟ್ರೀಯ ಹೆದ್ದಾರಿ 66 ಮತ್ತು ಕುಂದಾಪುರ ಪೇಟೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅ.೩೦ರೊಳಗೆ ವರದಿ ಸಲ್ಲಿಸಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Exit mobile version