Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತದೊಂದಿಗೆ ಧನ್ವಂತರಿ ಯಾಗ. ಚಿತ್ರಕೂಟ ಆಯುರ್ವೇದಲ್ಲಿ ನಡೆಯಿತು ವಿನೂತನ ಪ್ರಯೋಗ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತ ಕಲಶಹಸ್ತಾಯ… ಹೀಗೆ ಸಂಗೀತದ ಲಯದೊಂದಿಗೆ ಮಂತ್ರೋಚ್ಛರಿಸಿ ಧನ್ವಂತರಿ ಯಾಗ ನಡೆಸಿದ ವಿನೂತನ ಪರಿಕಲ್ಪನೆಗೆ ತಾಲೂಕಿನ ಆಲೂರು ಚಿತ್ರಕೂಟ ಆಯುವೇದ ಚಿಕಿತ್ಸಾಲಯ ಸಾಕ್ಷಿಯಾಗಿದೆ.

ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಗೀತ ಥೆರಪಿಯಿಂದ ಪ್ರೇರಿತರಾಗಿ ವಿಶ್ವದಲ್ಲಿಯೇ ಮೊದಲ ಭಾರಿಗೆಂಬಂತೆ ಮಂತ್ರದ ಜೊತೆಗೆ ಸಂಗೀತ ಸೇರಿಸಿ ಧನ್ವಂತರಿ ಹೋಮ ನಡೆಸುವ ನಿಶ್ಚಯವನ್ನು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಪ್ರವರ್ತಕ ವೈದ್ಯ ಡಾ. ರಾಜೇಶ್ ಬಾಯರಿ – ಡಾ. ಅನುಲೇಖಾ ಬಾಯರಿ ಅವರು ಕೈಗೊಂಡರು. ಹೋಮದ ಕಿರಣ ಹಾಗೂ ಸಂಗೀತದ ತರಂಗಗಳು ಅನಾರೋಗ್ಯ ಪೀಡಿತರ ಮೇಲೆ ಬೀರಬಹುದಾದ ಪರಿಣಾಮದ ಅಧ್ಯಯನ ಮಾಡುವ ಉದ್ದೇಶದೊಂದಿಗೆ ಶ್ರೀ ಶಂಕರಾಭರಣ ಧರ್ಮ ಸಂಸ್ಕೃತಿ ಪ್ರತಿಷ್ಠಾನಮ್ ಅವರ ಮುಂದಾಳತ್ವದಲ್ಲಿ ‘ವೇದನಾದೌಷದ ತರಂಗಿಣಿ’ ಎನ್ನುವ ಕಾರ್ಯಕ್ರಮದ ಆಯೋಜಿಸಿದರು. ವೇದ ಮಂತ್ರಗಳನ್ನು ಪಠಿಸುವ ಜೊತೆಗೆ ಹಾರ್ಮೋನಿಯಂ ಮೂಲಕವೂ ಕರ್ಣಾಟಕಿ ಸಂಗೀತದ ರೇವತೀ ರಾಗ ಹಾಗೂ ಹಿಂದುಸ್ಥಾನಿ ಸಂಗೀತದ ಭೈರಾಗಿ ಬೈರವ ರಾಗದ ಪನಿಸರಿ ಎಂಬ ನಾಲ್ಕು ಸ್ವರವನ್ನು ಮಂತ್ರಗಳನ್ನು ನುಡಿಸಲಾಯಿತು. ಆಜ್ಯ, ಪಾಯಸ, ಅಮೃತಬಳ್ಳಿ ಸಮಿತ್, ಅಮಲಕ, ದೂರ್ವೆ ಹೀಗೆ ಐದು ದ್ರವ್ಯಗಳನ್ನು ಹೋಮಕ್ಕೆ ಆಹುತಿಯಾಗಿ ನೀಡಲಾಗಿದೆ.

Watch Video

ನಿಟ್ಟೂರು ಕರ್ಕಮುಡಿ ಶ್ರೀ ಶಂಕರಾಭರಣ ಧರ್ಮ ಸಂಸ್ಕೃತಿ ಪ್ರತಿಷ್ಠಾನಮ್ ವಿದ್ವಾನ್ ಬಿ. ಎಂ. ಮಂಜುನಾಥ ಅಡಿಗ ಅವರ ನಿರ್ದೇಶನದಲ್ಲಿ ವೇ. ಮೂ. ಸುದರ್ಶನ ಭಟ್ ಮಡಿಕೆ, ಋತ್ವಿಜರಾದ ವೇ. ಮೂ. ಸುಧೀರ ಭಟ್ ಕಂಚಿಕೆರೆ, ವೇ.ಮೂ. ಪ್ರವೀಣ ಭಟ್ ಬಾಸ್ರಿ ಮೂಲಕ ವಿನೂತನ ಸಂಗೀತದೊಂದಿಗೆ ಧನ್ವಂತರಿ ಹೋಮ ಚಿತ್ರಕೂಟದ ವಠಾರದಲ್ಲಿ ಭಾನುವಾರ ಸಂಪನ್ನಗೊಂಡಿದ್ದು, ವಿದ್ವಾನ್ ಬಿ. ಎಂ. ಮಂಜುನಾಥ ಹಾರ್ಮೋನಿಯಂ ಮೂಲಕ ವೇದಮಂತ್ರಗಳನ್ನು ನುಡಿಸಿದರು.

ಭಾನುವಾರ ಬೆಳಗ್ಗೆ 6ಕ್ಕೆ ಆರಂಭವಾದ ಧನ್ವಂತರಿ ಹೋಮಕ್ಕೆ 8 ಗಂಟೆಗೆ ಪೂರ್ಣಾಹುತಿ ಅರ್ಪಿಸಲಾಯಿತು. ಇಪ್ಪತ್ತಕ್ಕೂ ಹೆಚ್ಚಿನ ಅನಾರೋಗ್ಯ ಪೀಡಿತರಲ್ಲದೆ ವಿನೂತನ ಧನ್ವಂತರಿ ಹೋಮ ವೀಕ್ಷಣೆಗಾಗಿ ಬೇರೆಡೆಯಿಂದ ಕಡೆಯಿಂದಲೂ ಭಾಗವಹಿಸಿದ ಜನರು ಮಂತ್ರ, ಸ್ವರನಾದದೊಂದಿಗೆ ಹೋಮದ ಘಮ ಆಸ್ವಾದಿಸಿದರು.

ಸಂಗೀತ ಥೇರಪಿಗಳು ಎಲ್ಲೆಡೆಯೂ ನಡೆಯುತ್ತಿದ್ದು, ನಮ್ಮ ದೇಶದಲ್ಲಿ ಪುರಾತನ ಕಾಲದಲ್ಲಿ ಸಂಗೀತ ಥೆರಪಿಯಾಗಿ ವೀಣೆಗಳನ್ನು ನುಡಿಸುತ್ತಿದ್ದ ಉಲ್ಲೇಖಗಳಿವೆ. ಯಾಗದೊಂದಿಗೆ ಸಂಗೀತದ ಥೇರಪಿ ಮಾಡಿರುವುದು ವಿಶ್ವದಲ್ಲಿಯೇ ಮೊದಲಭಾರಿಯಾಗಿದ್ದು, ಯಾಗದಲ್ಲಿ ಭಾಗವಹಿಸಿದವರಲ್ಲಿ ಧನಾತ್ಮಕ ಅಂಶಗಳು ಕಂಡುಬಂದಿದೆ. – ಡಾ. ರಾಜೇಶ್ ಬಾಯರಿ, ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ

Chithrakoota Ayurveda
Exit mobile version