ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಿತು.
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಪರಂಪರೆ, ಸಂಸ್ಕೃತಿಯ ಹಿರಿಮೆ ಕನ್ನಡ ನಾಡಿನದ್ದಾಗಿದೆ. ನಾಡಿನ ಏಳಿಗೆಗೆ ಪರಿಶ್ರಮ ಪಟ್ಟವರವನ್ನು ಸದಾ ನೆನಪಿಸಬೇಕಿದೆ. ನಾಡು ನುಡಿಯ ಚಿಂತನೆ ಭಾಷೆಯ ಅಭಿಮಾನ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.
ಬೈಂದೂರು ತಾಲೂಕು ದಂಡಾಧಿಕಾರಿ ಶೋಭಾಲಕ್ಷ್ಮೀ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಹೈಸ್ಕೂಲು ವಿದ್ಯಾರ್ಥಿಗಳು, ರತ್ತೂಬಾಯಿ ಜನತಾ ಪ್ರೌಢಶಾಲೆ, ಯುಬಿ ಶೆಟ್ಟಿ ಶಾಲೆಯ ವಿದ್ಯಾರ್ಥಿಗಳು ಸಮೂಹ ಗಾಯನದಲ್ಲಿ ಪಾಲ್ಗೊಂಡರು. ಆರಂಭದಲ್ಲಿ ನಾಡಗೀತ ಬಳಿಕ ನಿಗದಿಪಡಿಸಿದ ಮೂರು ಕನ್ನಡಗೀತೆ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. 600ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಸಂಗೀತ ನಿರ್ದೇಶಕ ಚಂದ್ರ ಬಂಕೇಶ್ವರ್ ವಿದ್ಯಾರ್ಥಿಗಳನ್ನು ತರಬೇತುಗೋಳಿಸಿದ್ದರು.
ಈ ಸಂದರ್ಭ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಬೈಂದೂರು ಪಿಎಸೈ ಅನಿಲ್ ಬಿಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್, ಉಪತಹಶೀಲ್ದಾರ ಭೀಮಪ್ಪ ಸೇರಿದಂತೆ ವಿವಿಧ ಗಣ್ಯರು, ಇಲಾಖಾ ಸಿಬ್ಬಂದಿಗಳು ಹಾಜರಿದ್ದರು. ಶಿಕ್ಷಕರಾದ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಸಿ.ಎನ್ ಬಿಲ್ಲವ ವಂದಿಸಿದರು.
ಇದನ್ನೂ ಓದಿ:
► ಕುಂದಾಪುರ ತಾಲೂಕಿನ ವಿವಿಧೆಡೆ ಸಾಮೂಹಿಕ ಕನ್ನಡ ಗೀತ ಗಾಯನ – https://kundapraa.com/?p=54121 .