Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಮೊಳಗಿತು ಸಹಸ್ರಕಂಠ ಗೀತ ಗಾಯನ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಭಾಗವಾಗಿ ಇಂದು ಬೆಳಿಗ್ಗೆ 11ಕ್ಕೆ ಜಗತ್ತಿನಾದ್ಯಂತ 5 ಲಕ್ಷ ಜನರಿಂದ ಏಕಕಾಲದಲ್ಲಿ ಸಾಮೂಹಿಕ ಲಕ್ಷಕಂಠ ಗೀತಗಾಯನ ನಡೆಯಿತು. ಈ ಅಭಿಯಾನದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವೂ ಕೈಜೋಡಿಸಿ, ಇದರ ಯಶಸ್ಸಿನಲ್ಲಿ ಭಾಗಿಯಾಯಿತು. ಪುತ್ತಿಗೆ, ಮಿಜಾರು, ವಿದ್ಯಾಗಿರಿ ಹಾಗೂ ನುಡಿಸಿರಿ ವೇದಿಕೆಯಲ್ಲಿ 5000ಕ್ಕೂ ಅಧಿಕ ವಿದ್ಯಾರ್ಥಿಗಳು ಗೀತಗಾಯನದಲ್ಲಿ ತಮ್ಮ ಕಂಠ ಜೋಡಿಸಿದರು.

4 ಪ್ರತ್ಯೇಕ ಸ್ಥಳಗಳಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಂದ, ಕೆ. ವಿ. ರಮಣ್ ಅವರ ನಿರ್ದೇಶನದಲ್ಲಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳು ಏಕಕಾಲದಲ್ಲಿ ಮೊಳಗಿತು. ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಎಲ್ಲಾ ವಿದ್ಯಾರ್ಥಿಗಳು ಕನ್ನಡ ಬಾವುಟವನ್ನು ಬೀಸುವ ಮೂಲಕ, ತಮ್ಮ ಕನ್ನಡದ ಅಭಿಮಾನವನ್ನು, ಕನ್ನಡ ನಾಡಿನ ಮೇಲಿರುವ ಪ್ರೀತಿಯನ್ನು ತೋರ್ಪಡಿಸಿದರು.

ಈ ಸಂದರ್ಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ‘ಕನ್ನಡನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಕನ್ನಡದಲ್ಲೇ ಮಾತನಾಡುತ್ತೇವೆ, ಕನ್ನಡದಲ್ಲೇ ಬರೆಯುತ್ತೇವೆ, ಕನ್ನಡದಲ್ಲೇ ನಿತ್ಯ ವ್ಯವಹಾರ ಮಾಡುವುದಾಗಿ ಪಣತೊಡುತ್ತೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧರಾಗಿರುತ್ತೇವೆ’ ಎಂದು ಸಂಕಲ್ಪ ಮಾಡಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ನಿಖಾಯದ ಡೀನ್ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version