Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರವನ್ನು ಬಹುವಾಗಿ ಪ್ರೀತಿಸುತ್ತಿದ್ದ ನಟ ಪುನಿತ್ ರಾಜಕುಮಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.29:
ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರು ಕುಂದಾಪುರಕ್ಕೆ ಹಲವು ಭಾರಿ ಭೇಟಿ ನೀಡಿದ್ದಲ್ಲದೇ, ಕುಂದಾಪುರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು.

2017ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ವೇಳೆ ಪುನಿತ್ ರಾಜಕುಮಾರ್ ಅವರು ಕುಂದಾಪುರದಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ. ಇಲ್ಲಿಯ ಜನ ಸಜ್ಜನರು. ಕುಂದಾಪುರ ಚಿಕನ್, ಮೀನು ಫ್ರೈ, ನೀರ್ದೋಸೆ ಸೂಪರ್. ಹಾಗೆನೇ ಇಲ್ಲಿನ ಪರಿಸರ ಕೂಡ ಅದ್ಭುತ… ಎಂದು ಅಭಿಮಾನದಿಂದಲೇ ಉದ್ಗರಿಸಿದ್ದರು.

ಅಂದು ಮಾಧ್ಯಮದವರೊಂದಿಗೆ ಮನಬಿಚ್ಚಿ ಮಾತನಾಡಿದ್ದ ಪುನಿತ್, ಕರಾವಳಿಗೂ ನಮ್ಮ ಕುಟುಂಬಕ್ಕೂ ದೊಡ್ಡ ನಂಟಿದೆ. ತಂದೆಯವರು ಕರಾವಳಿ ಜನರ ಪ್ರೀತಿಗೆ ಪಾತ್ರರಾದವರು. ಚಿಕ್ಕವನಿದ್ದಾಗ ಅವರೊಂದಿಗೆ ಈ ಭಾಗದಲ್ಲಿ ಶೂಟಿಂಗ್ ವೇಳೆ ಭಾಗವಹಿಸಿದ್ದೆ. ಒಂದು ಮುತ್ತಿನ ಕಥೆ, ಶ್ರಾವಣ ಬಂತು, ಅನುರಾಗ ಅರಳಿತು, ಅಪೂರ್ವ ಸಂಗಮ ಮೊದಲಾದ ತಂದೆಯವರು ನಟಿಸಿದ ಸಿನಿಮಾಗಳು ಈ ಭಾಗದಲ್ಲಿ ಚಿತ್ರೀಕರಣಗೊಂಡಿದ್ದರಿಂದ ಇಲ್ಲಿನ ಪರಿಚಯ ಚೆನ್ನಾಗಿಯೇ ಇದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಕುಂಭಾಸಿ, ಉಡುಪಿ ಮೊದಲಾದ ಪುಣ್ಯಕ್ಷೇತ್ರಗಳಿಗೆ ವರ್ಷಕ್ಕೊಮ್ಮೆ ಭೇಟಿ ನೀಡಿ ದರ್ಶನ ಪಡೆಯುತ್ತೇನೆ. ಹಾಗಾಗಿ ಕರಾವಳಿ ನನಗೆ ಇಷ್ಟ ಎಂದು ಹೇಳಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರದ ವಕ್ವಾಡಿಯ ವಿ.ಕೆ. ಮೋಹನ್ ಅವರ ನಿವಾಸಕ್ಕೆ 2017ರಲ್ಲಿ ಭೇಟಿ ನೀಡಿದ್ದ ಅಪ್ಪು

ಕುಂದಾಪುರಕ್ಕೆ ಹಲವು ಭಾರಿ ಭೇಟಿ:
ಪುನಿತ್ ರಾಜಕುಮಾರ್ ಅವರು ಹಲವು ಭಾರಿ ಕುಂದಾಪುರಕ್ಕೆ ಭೇಟಿ ನೀಡಿದ್ದರು. ಕುಂದಾಪುರದ ಕೊಲ್ಲೂರು, ಆನೆಗುಡ್ಡೆ ದೇವಸ್ಥಾನಕ್ಕೆ ಆಗಾಗ್ಗೆ ದೇವರ ದರ್ಶನಕ್ಕಾಗಿ ತೆರಳುತ್ತಿದ್ದರು. ಕುಂದಾಪುರ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಒಮ್ಮೆ ಭಾಗವಹಿಸಿದ್ದರು. ದಿವಂಗತ ವಿ. ಕೆ. ಮೋಹನ್‌ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಪುನಿತ್, ಮೂರ್ನಾಲ್ಕು ಭಾರಿ ಅವರ ಮನೆಗೆ ಬಂದಿದ್ದರು. 2014ರಲ್ಲಿ ಕುಂದಾಪುರದ ವಕ್ವಾಡಿಗೆ ಬಂದಿದ್ದಾಗ ಕೋಳಿ ಅಂಕವನ್ನು ನೋಡಿ ತಮ್ಮ ಮೊಬೈಲ್’ನಲ್ಲಿ ಚಿತ್ರೀಕರಿಸಿಕೊಂಡು ಖುಷಿಪಟ್ಟಿದ್ದರು. 2017ರಲ್ಲಿ ವಕ್ವಾಡಿಯ ವಿ.ಕೆ. ಮೋಹನ್‌ ಕುಟುಂಬಿಕರಾದ ವಿ.ಕೆ. ಹರೀಶ್‌ ಅವರ ನಿವಾಸಕ್ಕೆ ಪತ್ನಿ ಅಶ್ವಿನಿಯೊಂದಿಗೆ ಭೇಟಿ ನೀಡಿದ ಪುನೀತ್‌ ಮಧ್ಯಾಹ್ನದ ಭೋಜನ ಸವಿದಿದ್ದರು. ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಕೂಡ ಕುಂದಾಪುರದ ಕಾಣೆ ಮೀನು ಅಂದ್ರೆ ನನಗೆ ಇಷ್ಟ. ಶೆಟ್ಟಿ ಲಂಚ್ ಹೋಮ್’ನಲ್ಲಿ ತಿನ್ನುತ್ತಿದ್ದೆ ಎಂದು ನೆನಪಿಸಿಕೊಂಡಿದ್ದರು. ವಿ.ಕೆ. ಮೋಹನ್ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಿಧನರಾದಾಗ ಪುನೀತ್ ಬಹಳಷ್ಟು ನೊಂದುಕೊಂಡಿದ್ದ ಪುನಿತ್ ರಾಜಕುಮಾರ್, ವಿ.ಕೆ ಮೋಹನ್ ಅವರ ಜನ್ಮದಿನದಂದೇ ಇಹಲೋಕ ತ್ಯಜಿಸಿದ್ದು ನಿಜಕ್ಕೂ ಕಾಕತಾಳೀಯವೇ ಸರಿ.

ಬಿಲಿಂಡರ್ ಚಿತ್ರದ ಚಿಲ್ರಿ ಶೋಕಿ ಗಂಡ್ ನಾನಲ್ಲ ಹಾಡಿಗೆ ಧ್ವನಿಗಾಗಿದ್ದ ಅಪ್ಪು

ಸಂಗೀತ ನಿರ್ದೇಶಕ ರವಿ ಬಸ್ರೂರು ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಪುನಿತ್ ಅವರು, ಬಿಲಿಂಡರ್ ಚಿತ್ರದ ಚಿಲ್ರಿ ಶೋಕಿ ಗಂಡ್ ನಾನಲ್ಲ ಎಂಬ ಕುಂದಾಪ್ರ ಕನ್ನಡ ಹಾಡಿಗೆ ಧ್ವನಿ ನೀಡಿದ್ದರು. ಕುಂದಗನ್ನಡ ಭಾಷೆಯ ಸಿನಿಮಾಕ್ಕೆ ಕುಂದಾಪ್ರದ ಜನ ಅದ್ಭುತ ಪ್ರೋತ್ಸಾಹ ನೀಡಿದ್ದಾರೆ. ಅವಕಾಶ ಸಿಕ್ಕಲ್ಲಿ ಕುಂದಾಪ್ರ ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಪ್ರಮೋದ್ ಮರವಂತೆ ಸಾಹಿತ್ಯ, ರವಿ ಬಸ್ರೂರು ಸಂಗೀತವಿದ್ದ ಅಂಜನಿಪುತ್ರ ಸಿನೆಮಾದ ಚಂದ ಚಂದ ನನ್ ಹೆಡ್ತಿ ಎಂಬ ಕುಂದಾಪ್ರ ಕನ್ನಡ ಹಾಡಿಗೆ ಅಪ್ಪು ಹೆಜ್ಜೆ ಹಾಕಿದ್ದರು.

ಪ್ರತಿಭಾನ್ವಿತ ನಟ, ಕನ್ನಡಿಗರ ಅಪ್ಪು ಪುನಿತ್ ರಾಜಕುಮಾರ್ ಅವರ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕುಂದಾಪ್ರ ಡಾಟ್ ಕಾಂ ಬಳಗ ಪ್ರಾರ್ಥಿಸುತ್ತೇವೆ.

Exit mobile version