Kundapra.com ಕುಂದಾಪ್ರ ಡಾಟ್ ಕಾಂ

ಕ್ಲೀನ್ ಇಂಡಿಯಾ ಅಭಿಯಾನ ನಿತ್ಯ ನಿರಂತರವಾಗಲಿ: ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಸಾರ್ವಜನಿಕ ಸ್ಥಳಗಳ ಸ್ವಚ್ಚತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನಗಳನ್ನು ಮಾಡಿದರೆ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಅವರು, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ, ಭಾರತೀಯ ರೈಲ್ವೆ, ರೋವರ್ಸ್ ರೇಂಜರ್ಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಹಾಗೂ ಇತರ ಸಹಯೋಗದೊಂದಿಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದ ಕ್ಲೀನ್ ಇಂಡಿಯಾ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡಲು ಪ್ರವಾಸಿಗರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕು. ಮರುಬಳಕೆಯ ವಸ್ತುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು.

ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷರಾದ ಶಿಲ್ಪ ಸುದರ್ಶನ್, ರೈಲ್ವೇ ಇಲಾಖೆಯ ಸ್ಟೀವನ್ ಜಾರ್ಜ್, ಕಮರ್ಷಿಯಲ್ ಸೂಪರ್ವೈಸರ್ ಎಸ್.ಕೆ. ಭಟ್, ಸುದರ್ಶನ್ ನಾಯಕ್, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಉಡುಪಿ ಜಿಲ್ಲೆಯ ಆನಂದ ಬಿ ಅಡಿಗ, ಸುಮನ್ ಶೇಖರ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯ ಗಣೇಶ್ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲೆಯ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Exit mobile version