Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ರಾಜ್ಯ ಮಟ್ಟದ ಖೋ-ಖೋ ಕ್ರೀಡಾ ತರಬೇತುದಾರರ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಖೋ-ಖೋ ಕ್ರೀಡೆ ಎಲ್ಲಾ ಕ್ರೀಡೆಗಳಿಗೆ ತಾಯಿಯಿದ್ದಂತೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಎಲ್ಲಾ ಕ್ರೀಡೆಗಳಲ್ಲೂ ಯಶಸ್ಸನ್ನ ಕಾಣಬುಹುದು ಎಂದು ಸ್ಪೋಟ್ಸ್ ಆಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್‌ನ ಅಧ್ಯಕ್ಷ ಕೆ ಪಿ ಪುರುಷೋತ್ತಮ ನುಡಿದರು

ಅವರು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ದಕ್ಷಿಣ ಕನ್ನಡ ಖೋ-ಖೋ ಅಸೋಸಿಯೇಶನ್‌ನ ಜಂಟಿ ಆಶ್ರಯದಲ್ಲಿ, ಕಾಲೇಜಿನ ಕುವೆಂಪು ಸಭಾಭವನದಲ್ಲಿ ಜರುಗಿದ ಎರಡು ದಿನಗಳ ‘ಖೋ-ಖೋ ಕ್ರೀಡಾ ತರಬೇತುದಾರರ ಕಾರ್ಯಾಗಾರ’ ಹಾಗೂ ‘ರಾಜ್ಯ ಮಟ್ಟದ ಕ್ರೀಡಾ ತೀರ್ಪುಗಾರರ ಪರೀಕ್ಷೆ’ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಖೋ-ಖೋ ಕ್ರೀಡೆ ಸ್ಪರ್ಧಾಳುಗಳಲ್ಲಿ ಚಿತ್ತಾವಧಾನದ ಜತೆಗೆ ಬಹುಮಟ್ಟದ ಚಾಕಚಕ್ಯತೆ, ಸಾಮಾರ್ಥ್ಯ ಹಾಗೂ ಚುರುಕುತನವನ್ನು ಹೊಂದಲು ಸಹಕಾರಿ. ಈ ಕ್ರೀಡೆಯತ್ತಾ ಹೆಚ್ಚಿನ ಜನರು ಆಕರ್ಷಿತರಾಗುವಂತೆ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, ಖೋ-ಖೋ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಖೋ-ಖೋ ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳಬೇಕು. ಈ ಕ್ರೀಡೆ ಈಗಾಗಲೇ ಸೌಥ್ ಏಷಿಯನ್ ಗೇಮ್ಸ್‌ನಲ್ಲಿ ಪ್ರವೇಶವನ್ನು ಪಡೆದಿದೆ, ಮುಂದಿನ ದಿನಗಳಲ್ಲಿ ಏಷಿಯನ್ ಗೇಮ್ಸ್‌ನಲ್ಲೂ ಅರ್ಹತೆಯನ್ನು ಪಡೆಯಲಿದೆ ಎಂದು ತಿಳಿಸಿದರು.

ಕಾರ‍್ಯಕ್ರಮದ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ, ಕ್ರೀಡಾಪಟು ತಮ್ಮ ಕ್ರೀಡೆಯನ್ನು ಸದಾ ಪ್ರೀತಿಸಿ, ಗೌರವಿಸುತ್ತಿರಬೇಕು. ಕ್ರೀಡಾ ತೀರ್ಪುಗಾರರು ಸದಾ ತಮ್ಮ ವೃತ್ತಿಯ ಘನತೆಯನ್ನು ನಿಷ್ಪಕ್ಷಪಾತ ತೀರ್ಪಿನ ಮೂಲಕ ಎತ್ತಿ ಹಿಡಿಯುವತ್ತಾ ಶ್ರಮಿಸಬೇಕು ಎಂದರು. ಕಾಲೇಜಿನ ಪ್ರಾಚಾರ‍್ಯ ಮದು ಜಿ ಆರ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಮಟ್ಟದ ಕ್ರೀಡಾ ತೀರ್ಪುಗಾರರ ಪರೀಕ್ಷೆಯಲ್ಲಿ ಒಟ್ಟು 125 ಜನ ಪರೀಕ್ಷೆ ಎದುರಿಸಿದರು. ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್ ಗೌರವ ಕಾರ‍್ಯದರ್ಶಿ ಆರ್ ಮಲ್ಲಿಕಾರ್ಜುನಯ್ಯ, ದಕ್ಷಿಣ ಕನ್ನಡ ಖೋ-ಖೋ ಅಸೋಸಿಯೇಶನ್‌ನ ಕೋಶಾಧಿಕಾರಿ ಶಿವರಾಮ್ ಸಿ ಯನೇಕಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಾ ಕಾರ‍್ಯಮ ನಿರ್ವಹಿಸಿ, ನೀತು ವಂದಿಸಿದರು.

Exit mobile version