ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲರೂ ಭಾಷೆಯ ಬೆಳವಣಿಗೆ, ಉಳಿವಿಗೆ ಶ್ರಮಿಸಬೇಕು. ಕನ್ನಡ ನಾಡು ನುಡಿಯಿಂದ ಏಕತೆ, ಸಮಗ್ರತೆ ಸಾಧ್ಯವಾಗಿದೆ. ನಮ್ಮ ಕುಂದಾಪ್ರ ಕನ್ನಡ ಶ್ರೇಷ್ಠ ಕನ್ನಡವಾಗಿದ್ದು, ಈ ಭಾಗದ ಜನರು ಎಲ್ಲೆಡೆ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಶ್ರೇಷ್ಠ ಕನ್ನಡ ನಾಡು, ಕನ್ನಡ ಭಾಷೆ ಇನ್ನಷ್ಟು ಅಭಿವೃದ್ಧಿಯಾಗಬೇಕು. ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗಳಲ್ಲಿ ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಸರಕಾರದ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ವತಿಯಿಂದ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಸೋಮವಾರ ಜರಗಿದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭಾರ್ಗವ್ ಮಧ್ಯಸ್ಥ, ಮಾನ್ಯತಾ ವಿ.ಶೇಟ್, ವರುಣ್ ಎಂ., ಶ್ರೇಯಾ ಖಾರ್ವಿ, ಮಂಜುಳಾ, ಶ್ರೀರಕ್ಷಾ ಶೆಣೈ ಮತ್ತು ನಿಶಾ ಅವರನ್ನು ಗೌರವಿಸಲಾಯಿತು. ಶಾಲೆಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಎಚ್.ಗಣೇಶ ಕಾಮತ್, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಯು.ನಾರಾಯಣ ಪೈ, ಸ.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಮತ್ತಿತರರು ಉಪಸ್ಥಿತರದ್ದರು.
ಪ್ರೌಢಶಾಲೆಯ ಉಪಪ್ರಾಂಶುಪಾಲ ಉಮೇಶ ಕರ್ಣಿಕ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಆಕಾಂಕ್ಷಾ ಆಚಾರ್ಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ನಿಶಾ ಕಾರ್ಯಕ್ರಮ ನಿರ್ವಹಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ವಂದಿಸಿದರು.