ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವ ಸಂವೇದನೆಗೆ ಮಾತೃಭಾಷೆಯೇ ಮೂಲಧಾತು. ಮಾತೃಭಾಷೆಯಿಂದ ದೂರ ಸರಿದಂತೆಲ್ಲಾ ಸಂವೇದನೆಯೂ ಕ್ಷೀಣಿಸುತ್ತದೆ. ಮಕ್ಕಳ ಮೇಲೆ ಪರಭಾಷಾ ಒತ್ತಡ ಹೇರಿದಂತೆಲ್ಲಾ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆಯೇ ಹೆಚ್ಚು ಎಂದು ಸಾಹಿತಿ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು.
ಅವರು ಸೋಮವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣ ಹಾಗೂ ಕಾಲೇಜಿನ ವಿವಿಧ ಸಂಘಗಳು ಜಂಟಿಯಾಗಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಮಾತನಾಡಿ, ಭಾಷೆ ಹೃದಯ ಅರಳಿಸುವ ಸಾಧನ. ಅದರೊಂದಿಗೆ ನೆಲ ಜಲ ಬದುಕಿನ ಸಾಂಗತ್ಯವಿದೆ. ಕನ್ನಡ ಎಂದಾಗ ಮೂಡುವಷ್ಟು ಪ್ರೀತಿ, ಸಂಚಲನ ಮಾತೃಭಾಷೆಯಲ್ಲದೇ ಬೇರೆ ಭಾಷೆಯಿಂದ ಸಾಧ್ಯವಿಲ್ಲ. ಕನ್ನಡಕ್ಕಾಗಿ ನಾವೇ ಶ್ರಮಿಸಬೇಕು, ಭಾಷೆ ಉಳಿಸುವ ಸೈನಿಕರಾಗಲು ಪಣತೊಡೋಣ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯೋತ್ಸವದ ಹೊತ್ತಿನಲ್ಲಿ ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ರಾಜ್ಯ ಸರಕಾರದಿಂದ ಆಗಿದೆ. ಕನ್ನಡವನ್ನು ನಿತ್ಯನೂತನವಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಅಭಿಯಾನ ಮನೆ ಮನಗಳನ್ನು ತಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಕನ್ನಡ ಭಾಷೆಯನ್ನು ಕಡ್ಡಾಯ ವಿಷಯವಾಗಿದೆ. ಅದು ಪ್ರತಿ ವಿದ್ಯಾರ್ಥಿಗೆ ಮಾತೃಭಾಷೆ ಕಲಿಕೆಯ ಅಗತ್ಯವಿರುವುದುದನ್ನು ತೋರಿಸುತ್ತದೆ. ವೃತ್ತಿ ಕಾರಣಕ್ಕೆ ಎಷ್ಟೇ ಭಾಷೆ ಕಲಿತರೂ ಮಾತೃಭಾಷೆಯ ಪ್ರೇಮ ಎಂದಿಗೂ ಕುಂದಬಾರದು ಎಂದರು.
ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎಂ. ಎನ್. ಶೇರುಗಾರ್, ಶಿವರಾಜ ಪೂಜಾರಿ, ಚಂದ್ರ ಹಳಗೇರಿ, ಬೈಂದೂರು ಗ್ರಾಪಂ ಮಾಜಿ ಅಧ್ಯಕ್ಷೆ ಭಾಗೀರಥಿ ಉಪಸ್ಥಿತರಿದ್ದರು.
ಕನ್ನಡಾಂಭೆಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ, ಕನ್ನಡ ಗೀತೆಗಳ ಗಾಯನ ಮಾಡಲಾಯಿತು. ಈ ಸಂದರ್ಭ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪ್ರಂಬಂಧ ಸ್ವರ್ಧೆಯಲ್ಲಿ ತೃತೀಯ ಬಿಕಾಂ ಅನುಶ್ರೀ ಪ್ರಥಮ, ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ವಿನೋದಾ ದ್ವಿತೀಯ ಹಾಗೂ ಸುನಂದಾ ತೃತೀಯ ಸ್ಥಾನ ಪಡೆದುಕೊಂಡರು. ಕನ್ನಡ ನಾಡಪ್ರೇಮ ಗೀತೆಯಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ವಿನೋದಾ ಪ್ರಥಮ, ಕಾಂಚನಾ ದ್ವಿತೀಯ ಹಾಗೂ ಸುನಂದಾ ತೃತೀಯ ಸ್ಥಾನ ಪಡೆದುಕೊಂಡರು. ಕನ್ನಡದಲ್ಲಿ ಮಾತನಾಡುವ ಸ್ವರ್ಧೆಯಲ್ಲಿ ತೃತೀಯ ಬಿಎ ಅನುಶ್ರೀ ಪ್ರಥಮ ಹಾಗೂ ದ್ವಿತೀಯ ಬಿಬಿಎ ಚಿನ್ಮಯ ದ್ವಿತೀಯ ಸ್ಥಾನ ಪಡೆದುಕೊಂಡರು.
ಕನ್ನಡ ವಿಭಾಗದ ಮುಖ್ಯಸ್ಥ, ಕಾರ್ಯಕ್ರಮ ಸಂಚಾಲಕ ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ನವೀನ್ ಹೆಚ್. ಜೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ವಂದಿಸಿದರು. ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.