Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಅಂಬೇಡ್ಕರ್ ಕಾಲನಿಯ 13 ಅಪೂರ್ಣ ಅನುದಾನ ಪೂರ್ಣಗೊಳಿಸಲು ಕ್ರಮ: ಸಚಿವ ಕೋಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪೌರ ಕಾರ್ಮಿಕರ ಅಂಬೇಡ್ಕರ್ ಕಾಲನಿಯಲ್ಲಿನ ಅಪೂರ್ಣ ಮನೆ ಸಂಪೂರ್ಣವಾಗಿ ನಿರ್ಮಿಸಲು ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಲ್ಲದೆ 6 ತಿಂಗಳಲ್ಲಿ ಮನೆಗಳ ಬಾಕಿ ಅನುದಾನ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ಅಂಬೇಡ್ಕರ್ ಕಾಲನಿಯಲ್ಲಿರುವ ಪೌರ ಕಾರ್ಮಿಕರ ಮನೆಗಳು ಅರ್ಧಂಬರ್ಧ ಆಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, 13 ಮನೆಗಳು ಅಪೂರ್ಣವಾಗಿದೆ. ಮೂರು ಮನೆ ಪೂರ್ಣಗೊಂಡಿದ್ದು, ಕೊನೆಯ ಕಂತು ಬಾಕಿ ಇದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಜೊತೆ ಮಾತನಾಡಿದ್ದು, ಇನ್ನು 15 ದಿನದಲ್ಲಿ ಪೂರ್ಣಮನೆ ಕೊನೆಯ ಕಂತು ಖಾತೆಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಕಾಲನಿಯ ಮೂರು ಮನೆ ಮುಗಿದ್ದರೂ ಹತ್ತು ಮನೆ ಅರ್ಧಂಬರ್ಧ ಆಗಿದೆ. ಯಾವುದಾದರೂ ಮೂಲದಿಂದ ಪ್ರಥಮ ಹಂತದಲ್ಲಿ ೩ ಮನೆ ತೆಗೆದುಕೊಂಡು ಸಂಪೂರ್ಣ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದು, ಮನೆ ಪೂರ್ಣವಾದ ನಂತರ ಅವರ ಖಾತೆಗೆ ಹಣ ಹಾಕಲಾಗಿತ್ತದೆ. ನಂತರ ಉಳಿದ ಮನೆಗಳ ಸಂಪೂರ್ಣ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. 6 ತಿಂಗಳಲ್ಲಿ ಮನೆ ಕಾಮಗಾರಿ ಸಂಪೂರ್ಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಲನಿ ವಾಸಿ ಕೆಲವು ಕುಟುಂಬಗಳಿಗೆ ಹಕ್ಕುಪತ್ರದ ಸಮಸ್ಯೆ ಬಗ್ಗೆ ಗಮನಸೆಳೆದ ಪ್ರಶ್ನೆಗೆ ಉತ್ತರಿಸಿ, ಆರು ಕುಟುಂಬಗಳಿಗೆ ಪರಂಭೂಕ ಎನ್ನುವ ಕಾರಣ ಪರಂಭೂಕ ವಿರುಕ್ತಮಾಡಿ ಹಕ್ಕುಪತ್ರ ಕೊಡುವಂತೆ ತಹಸೀಲ್ದಾರ್ ಪ್ರಸ್ತಾಪ ಸರ್ಕಾರಕ್ಕೆ ಕಳುಹಿಸಿದ್ದು, ಪ್ರಸ್ತಾಪ ತಿರಸ್ಕಾರಗೊಂಡಿದ್ದು, ಪುನಃ ಹಕ್ಕುಪತ್ರ ಕೊಡುವ ಕೆಲಸ ಮಾಡಲಾಗುತ್ತದೆ. ಕಾಲನಿ ನೀರು ತೂಡು ವಿಸ್ತರಿಸಿ ಕಲ್ಲುಕಟ್ಟಿ ಸ್ಲಾಬ್ ಹಾಕಿ ರಿಂಗ್‌ರಸ್ತೆ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.

ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಪುರಸಭಾ ಸದಸ್ಯ ಪ್ರಭಾಕರ ವಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪೌರ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರ್, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version