Kundapra.com ಕುಂದಾಪ್ರ ಡಾಟ್ ಕಾಂ

ಸ್ವಹಿತಾಸಕ್ತಿ ಬಿಟ್ಟು, ವಿಶಾಲತೆಯ ದೃಷ್ಟಿ ಹೊಂದಬೇಕಿದೆ: ಡಾ| ಡಿ. ವಿರೇಂದ್ರ ಹೆಗ್ಗಡೆ

ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿಯ ಗಣೇಶೋತ್ಸವ ಸುವರ್ಣ ಮಹೋತ್ಸವ

ಕುಂದಾಪುರ: ನಮ್ಮ ದೃಷ್ಟಿಕೋನ ಹಾಗೂ ಚಿಂತನೆ ವಿಶಾಲವಾದಂತೆ ನಮ್ಮೊಳಗಿನ ಸಂಕುಚಿತ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖ್ಯ ಪಾತ್ರ ಬಹುದೊಡ್ಡದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿ ಯ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ರಕ್ಷಣೆಗೆ ಅನ್ವರ್ಥರಾಗಿರುವ ರಾಮಕ್ಷತ್ರಿಯ ಸಮಾಜ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಹಿಂದಿನಿಂದಲೂ ಮೈಗೂಡಿಸಿಕೊಂಡು ಬಂದಿದೆ, ರಾಮಕ್ಷತ್ರಿಯರು ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತುಕೊಡದೆ, ವಿಶಾಲ ದೃಷ್ಟಿಯಿಂದ ನೋಡುತ್ತಿರುವುದರ ಪರಿಣಾಮ ಸಮಾಜದಲ್ಲಿ ಸುಧಾರಣೆ ಕಾಣುವಂತಾಗಿದೆ. ಅವರೆಲ್ಲೂರ ಸಂಘಟನೆ, ಒಗ್ಗಟ್ಟು ಇನ್ನಷ್ಟು ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದ ಅವರು ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಸನ್ಮಾರ್ಗದಲ್ಲಿ ನಡೆಯಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತವಾಗಲು ಸಾಧ್ಯ ಎಂದರು.

ಮಾಜಿ ಬೈಂದೂರು ಶಾಸಕ ವಿಶ್ವ ರಾಮಕ್ಷತ್ರಿಯರ ಸಂಘದ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣ, ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌.ವಿ. ನರಸಿಂಹಮೂರ್ತಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಶುಭಾಸಂಶನೆಗೈದರು. ಸಮಸ್ತ ರಾಮಕ್ಷತ್ರಿಯ ಸಮಾಜದ ವತಿಯಿಂದ ಡಾ| ಹೆಗ್ಗಡೆ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ‌ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್‌. ಉಪಸ್ಥಿತರಿದ್ದರು. ರಾಮಕ್ಷತ್ರಿಯ ಯುವಕ ಮಂಡಳಿಯ ಸುವರ್ಣ ಸಂಭ್ರಮ 2015ರ ಗೌರಾವಾಧ್ಯಕ್ಷ ಅಜಿತ್‌ ಕುಮಾರ್‌ ಬಾಣ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಉದಯ ಹವಲ್ದಾರ್‌ ಉಪಸ್ಥಿತರಿದ್ದರು.

ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಸುರೇಶ್‌ ಬೆಟ್ಟಿನ್‌ ಸ್ವಾಗತಿಸಿದರು. ಯುವಕ ಮಂಡಲದ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಯು. ಪ್ರಸ್ತಾವನೆಗೈದರು. ಕಾರ್ಯದರ್ಶಿ ರಾಜಶೇಖರ್‌ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ನಿತ್ಯಾನಂದ ಶೇರೆಗಾರ್‌ ಕಾರ್ಯಕ್ರಮ ನಿರೂಪಿಸಿದರು.

 

Exit mobile version