Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ, ಶೇ.12 ಡಿವಿಡೆಂಡ್ ಘೋಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು, ನ.09:
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯು ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಇಂದು ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಮಾತನಾಡಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿಂದಿನ ಸಾಲಿನಲ್ಲಿ ರೂ 204 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, 1.02ರೂ.ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ ರೂ 37.04 ಕೋಟಿ ಠೇವಣಿ ಹೊಂದಿ, ಸದಸ್ಯರಿಗೆ ರೂ 34.60 ಕೋಟಿ ಸಾಲ ನೀಡಿದೆ. ಅದರಲ್ಲಿ ರೂ 8.28 ಕೋಟಿ ಮೊತ್ತದ ಕೃಷಿ ಸಾಲವನ್ನು ಸಂಘವು ನೀಡಿದೆ ಎಂದರು.

ಮುಂದಿನ ತಿಂಗಳು ಸಂಘ ವ್ಯಾಪ್ತಿಯ ಪ್ರತಿ ರೈತರ ಮನೆ ಮನೆಗೆ ತೆರಳಿ ಸಂಘದ ಕೃಷಿ ಸಾಲ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿ ರೈತರಿಗೂ ಇದರ ಸದುಪಯೋಗ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಸಂಘದ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸದಸ್ಯರ ಸಹಕಾರದಿಂದ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ. ಪ್ರಧಾನ ಕಛೇರಿ ಕಟ್ಟಡ ವಿಸ್ತರಣೆ ಮಾಡುವ ಉದ್ದೇಶವಿದ್ದು, ನ.29ರಂದು ಮರವಂತೆ ಶಾಖೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಪ್ರಧಾನ ಕಛೇರಿ ಸೇರಿದಂತೆ ಎಲ್ಲಾ ಶಾಖೆಗಳು ಸ್ವಂತ ಜಾಗದಲ್ಲಿ ಕಟ್ಟಡ ಹೊಂದಿದಂತಾಗಿದೆ ಎಂದರು.

ಉಪಾಧ್ಯಕ್ಷರಾದ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ ಇದ್ದರು.

ಈ ಸಂದರ್ಭ ನೂತನ ಬಡಾಕೆರೆ ಶಾಖೆಯಲ್ಲಿ ಉತ್ತಮ ಠೇವಣಿ ಹಾಗೂ ಸಾಲ ವಸೂಲಾತಿ ಮಾಡಿದ ಶಾಖಾ ಪ್ರಬಂಧಕ ರತ್ನಾಕರ ಬಿಲ್ಲವ ಅವರನ್ನು ಗೌರವಿಸಲಾಯಿತು. ಸುಷ್ಮಿತಾ ಮೊಗವೀರ ಪ್ರಾರ್ಥಿಸಿದರು. ನಿರ್ದೇಶಕ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವರದಿ, ಆಯವ್ಯಯ ವಿವರ ನೀಡಿದರು. ಹಿರಿಯ ಸಿಬ್ಬಂದಿ ಸಂಜೀವ ಮಡಿವಾಳ ವಂದಿಸಿದರು. ಮರವಂತೆ ಶಾಖಾಧಿಕಾರಿ ಸೋಮಯ್ಯ ಬಿಲ್ಲವ ನಿರೂಪಿಸಿದರು.

Exit mobile version