ಕುಂದಾಪ್ರ ಡಾಟ್ ಕಾಂ ಸುದ್ದಿ
ಕೆನಡಾ: ವಿದೇಶದಲ್ಲಿರುವ ನಾವು ನಮ್ಮ ಅನುಭವ ಕಥನಗಳನ್ನು ದಾಖಲಿಸುವ ಮೂಲಕ ಇಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಅರಿವು ಮೂಡಿಸ ಬೇಕು. ಈ ಕೃತಿ ಆ ಕೆಲಸವನ್ನು ಮಾಡುತ್ತಿದೆ’ ಎಂದು ಕೆನೆಡಿಯನ್ ಹವ್ಯಕ ಸಂಘದ ಅಧ್ಯಕ್ಷರಾದ ಡಾ.ಡಿ.ಪರಮೇಶ್ವರ ಭಟ್ ಹೇಳಿದರು.
ಅವರು ಟೊರೊಂಟೋದ ಶೃಂಗೇರಿ ವಿದ್ಯಾಭಾರತಿ ಸಮುದಾಯ ಭವನದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಬಾಳಿಕೆ ರಾಮ ಭಟ್ ಬರೆದು ಕುಂದಾಪುರದ ಜನಪ್ರತಿನಿಧಿ ಪ್ರಕಾಶನವು ಪ್ರಕಟಿಸಿದ ‘ಬಾಳಿಕೆಯಿಂದ ಕೆನಡಾಕ್ಕೆ’ ಎಂಬ ಅನುಭವ ಕಥನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೆನಡಾದ ಕಾನ್ ಕಾರ್ಡಿಯಾ ವಿ.ವಿ.ದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ಮತ್ತು ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನಾಲ್ಕು ಕೃತಿಗಳನ್ನು ಬರೆದಿರುವ ಬಾಳಿಕೆ ರಾಮ ಭಟ್ ತಮ್ಮ ಪ್ರಸ್ತುತ ಕೃತಿಯ ಹಿನ್ನೆಲೆ ಹಾಗೂ ಉದ್ದೇಶಗಳ ಕುರಿತು ಮಾತನಾಡಿದರು. ಈ ಸಂದರ್ಭ ಶಾರದಾ ಡಿ.ಪಿ.ಭಟ್ ಮತ್ತು ರಾಮ ಭಟ್ಟರ ಪತ್ನಿ ಪಾರ್ವತಿ ಭಟ್ ಉಪಸ್ಥಿತರಿದ್ದರು.
ವಾಟರ್ಲೂ ವಿ.ವಿ.ಪ್ರಾಧ್ಯಾಪಕ ಡಾ.ನವೀನ ಹೆಗಡೆ ಕೃತಿಕಾರರನ್ನು ಸಭೆಗೆ ಪರಿಚಯಿಸಿದರು. ಹವ್ಯಕ ಸಂಘದ ಉಪಾಧ್ಯಕ್ಷ ಡಾ. ಕೃಷ್ಷಪ್ರಸಾದ ಬಾಳಿಕೆ ಲೇಖಕರನ್ನು ಅಭಿನಂದಿಸಿ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.. ಮಾ.ಪ್ರಣವ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.