Site icon Kundapra.com ಕುಂದಾಪ್ರ ಡಾಟ್ ಕಾಂ

ಕ್ರೀಡಾ ಮನೋಭಾವ ವಿದ್ಯಾರ್ಥಿಗಳ ಮನಸ್ಸನ್ನು ಗಟ್ಟಿಗೊಳಿಸುತ್ತದೆ: ಪಿ.ಎಸ್.ಐ ನಿರಂಜನ್ ಗೌಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳ ಮನಸ್ಸು ಗಟ್ಟಿ ಆಗುವುದರ ಜೊತೆಗೆ ಎಂತಹ ಕಠಿಣ ಪರಿಶ್ರಮವನ್ನು ಎದುರಿಸಲು ಕೂಡ ಸಜ್ಜಾಗುತ್ತದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್‍ ನಿರಂಜನ್ ಗೌಡ ಹೇಳಿದರು.

ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿ.ಎ/ಸಿ.ಎಸ್ ಸಂಸ್ಥೆ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಕೂಡ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸುಜ್ಞಾನ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ಮಾತನಾಡಿ, ಕುಂದಾಪುರದಲ್ಲಿ ಸಿ.ಎ/ಸಿ.ಎಸ್ ನಂತಹ ಕಠಿಣ ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿಯ ಕಾರ್ಯ ಮೆಚ್ಚುವಂತದ್ದು ಎಂದರು.

ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿರುವ ಸಚಿನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಿ.ಎ ಮತ್ತು ಸಿ.ಎಸ್ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಕ್ರಿಕೆಟ್, ತ್ರೋಬಾಲ್, ಹಗ್ಗಜಗ್ಗಾಟ ಪಂದ್ಯಾವಳಿಗಳನ್ನು ಆಯೋಜಿಸಲಾಯಿತು. ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಭರತ್ ಶೆಟ್ಟಿ ಸ್ವಾಗತಿಸಿ ವೈಷ್ಣವಿ ಧನ್ಯವಾದಗೈದರು

Exit mobile version