Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳ ಪ್ರತಿಭೆ ಅನಾರವಣಕ್ಕೆ ಸಂಘಟನೆಗಳು ವೇದಿಕೆ ಕಲ್ಪಿಸಬೇಕು: ರಾಜು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸಂಘಟನೆಗಳು ಮುಂದೆ ಬಂದು ವೇದಿಕೆ ಕಲ್ಪಿಸಿಕೊಟ್ಟಾಗ ಸಣ್ಣ ಹಳ್ಳಿಯ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಂಡು ಮುಂದೊಂದು ದಿನ ಸಾಧನೆಯ ಹೆಜ್ಜೆಯನ್ನಿಡಲು ಸಾಧ್ಯ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವಿಕೆ ಪೋಷಕರಿಂದ ಆರಂಭವಾಗಲಿ ಎಂದು ಯುವವಾಹಿನಿ ರಿ. ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಅವರು ಹೇಳಿದರು.

ಅವರು ಯುವವಾಹಿನಿ ರಿ. ಯಡ್ತಾಡಿ ಘಟಕದ ವತಿಯಿಂದ ಗುಲಾಬಿ ಪೂಜಾರ್ತಿ ಅವರ ಮನೆ ವಠಾರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಂದಿನ ಮಕ್ಕಳೇ ಮುಂದಿನ ಸುಶಿಕ್ಷಿತ ಸಮಾಜ ನಿರ್ಮಾಣದ ಶಿಲ್ಪಿಗಳು, ಅವರನ್ನು ಸುಂದರ ಶಿಲ್ಪಿಗಳನ್ನಾಗಿ ರೂಪಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಾರ್ಕೂರು ಸ್ವಾಗತ್ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ನಡೂರು ಬ್ರಿಕ್ಸ್‌ನ ಮಾಲಕರಾದ ಸಂದೀಪ್ ಪೂಜಾರಿ, ಯುವವಾಹಿನಿಯ ಕಾರ್ಯದರ್ಶಿ ಅಜಿತ್ ಪೂಜಾರಿ, ಸಾಂಸ್ಕೃತಿಕ ನಿರ್ದೇಶಕರಾದ ಪ್ರತೀಮಾ ರಮೇಶ್, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಟೋಟ ಸ್ಪರ್ಧೆಗಳು ಜರಗಿದವು.

Exit mobile version