Kundapra.com ಕುಂದಾಪ್ರ ಡಾಟ್ ಕಾಂ

ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಆಹಾರ ಕ್ರಮ

ದಕ್ಷಿಣಾಯನದಲ್ಲಿ ಬರುವ ಎರಡನೇ ಋತುವೇ ಶರತ್ ಋತು. ಶರತ್ ಋತುವು ಪ್ರಾರಂಭವಾಗುತಿದ್ದಂತೆ ಬಿಸಿಲು ಪ್ರಕರವಾಗುತ್ತದೆ. ಹಾಗಾಗಿ ಪಿತ್ತ ದೋಷ ಹೆಚ್ಚಾಗುತ್ತದೆ. ಋತುವಿಗೆ ಅನುಸಾರ ನಮ್ಮ ಆಹಾರ ವಿಹಾರಗಳಲ್ಲಿ ಬದಲಾವಣೆ ಯಾವಾಗ ಮಾಡಿಕೊಳ್ಳುವೆವೋ ಆಗ ಮಾತ್ರ ಕಾಲ ವೈಪರಿತ್ಯತೆಯಿಂದಾಗುವ ರೋಗಗಳಿಂದ ವಿಮುಕ್ತರಾಗಿ ಆರೋಗ್ಯವಂತರಾಗಿರಲು ಸಾಧ್ಯ. ಚಳಿಗಾಲ ಅಂದರೆ ಶುಷ್ಕ ಹವೆ ಎಲ್ಲೆಡೆ ಓಡಾಡುತ್ತವೆ. ಅದು ಮಾನವನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಚಳಿಗಾಲಕ್ಕೆ ಬದಲಾದ ಜೀವನಶೈಲಿ ಹಾಗೂ ವಾತಾವರಣ ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಕಾಲಕ್ಕೆ ಅನುಗುಣವಾಗಿ ಪರಿಸರ ಬದಲಾದಂತೆ ಶರೀರದಲ್ಲೂ ಬದಲಾವಣೆಯಾಗುತ್ತದೆ.
ಈ ಸಮಯದಲ್ಲಿ ಸಾಂಕ್ರಾಮಿಕ ಜ್ವರ ಕಾಡುವುದು ಹೆಚ್ಚು. ನೆಗಡಿ, ಕೆಮ್ಮು, ತಲೆನೋವಂತೂ ಸಹಜ. ಉಸಿರಾಟದ ಸಮಸ್ಯೆ ಹೆಚ್ಚಾ ಗಿ ಕಾಡುವುದು ಇದೇ ಸಮಯದಲ್ಲೇ. ಅಸ್ತಮಾ ಇರುವವರು ಈ ಸಮಯದಲ್ಲಿ ಮತ್ತಷ್ಟು ನರಳುತ್ತಾರೆ. ಚಳಿಗಾಲದಲ್ಲಿ ಆಗಾಗ ಮಳೆಯಾದರಂತೂ ಅಲ್ಲಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತವೆ. ಅವು ಮಲೇರಿಯಾ, ಡೆಂಘೆಗಳಂಥ ಮಾರಕ ರೋಗಗಳನ್ನು ಹರಡುತ್ತವೆ. ವಾಂತಿ, ಭೇದಿ ಕಾಮಾಲೆಯೂ ಕಾಡುವುತ್ತದೆ.

ಮಧುಮೇಹ, ಶ್ವಾಸಕೋಶ ಸಮಸ್ಯೆ, ಹೃದಯ ರೋಗ ಹಾಗೂ ಸಂಧಿವಾತಗಳಂಥ ದೀರ್ಘ ಕಾಲ ರೋಗ ಇರುವವರು ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಅಂದರೆ ಮಕ್ಕಳು ಹಾಗೂ ವೃದ್ಧರು ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ.

ಕಹಿ, ಒಗರು ಮತ್ತು ಸಿಹಿ ರಸದ ಪದಾರ್ಥಗಳನ್ನು ಹೆಚ್ಚು ಬಳಸಬೇಕು. ಉ.ದಾ:- ಹಾಗಲಕಾಯಿ , ಮಜ್ಜಿಗೆ , ಹಾಲು ಧಾನ್ಯ -ಅಕ್ಕಿ, ಗೋಧಿ, ಜವೆಗೋಧಿ, ಹೆಸರು ಕಾಳು, ಕುಂಬಳಕಾಯಿ, ಸಿಹಿ-ಕುಂಬಳ, ಸೋರೆಕಾಯಿ, ಹೀರೆಕಾಯಿ , ಗಾಜರ್, ಪಾಲಾಕ್, ಬೆಟ್ಟದನಲ್ಲೀಕಾಯಿ, ಬಾಳೆಹಣ್ಣು , ದಾಳಿಂಬೆ, ಮೂಸಂಬಿ, ಸೇಬುಹಣ್ಣು ಹಸುವಿನ ಹಾಲು, ತುಪ್ಪ, ಬೆಣ್ಣೆ, ಕೆನೆ, ಮಜ್ಜಿಗೆ, ಜೀರಿಗೆ, ಕೊತ್ತಂಬರಿ ಬೀಜ, ಬಿಸಿ ನೀರನ್ನೇ ಬಳಸಬೇಕು .

ಉಪ್ಪು, ಹುಳಿ ಮತ್ತು ಖಾರ ರಸದ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಉದಾ :- ಹುಣಸೆ , ಹಸಿರುಮೆಣಸಿನಕಾಯಿ ಮುಂತಾದವು. ಹೊಸ ಅಕ್ಕಿ, ಹೊಸ ಗೋಧಿ , ಜೋಳ, ಉದ್ದಿನ ಬೇಳೆ , ಹುರುಳಿಕಾಳು , ಕಡಳೆಕಾಳು, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಸೌತೆಕಾಯಿ , ಮೆಂತ್ಯ, ಪುದೀನಾ, ಬದನೆಕಾಯಿ, ನೆಲ ಕಡಳೆ, ಬೆಂಡೆಕಾಯಿ , ಕಿತ್ತಳೆ, ಎಲ್ಲಾ ಹುಳಿ ಹಣ್ಣುಗಳು, ಮೊಸರು, ಹುಳಿ ಮಜ್ಜಿಗೆ, ಹಿಂಗು, ಸಾಸಿವೆ, ಎಳ್ಳು, ತಣ್ಣೀರು ಬಳಸಬಾರದು. ಎಣ್ಣೆಯಲ್ಲಿ ಕರಿದ ಪದಾರ್ಥ, ಮಧ್ಯಪಾನ ಬೇಡ.

ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳು ಮಿತಿಯಲ್ಲಿರಲಿ
ಚಳಿಗಾಲದಲ್ಲಿ ಹಾಲಿನ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಒಳಿತು. ನಮ್ಮ ದೇಹದಲ್ಲಿ ಕಫದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೆ ಈಗಾಗಲೇ ಇರುವ ಕಫವನ್ನು ಗಟ್ಟಿ ಮಾಡುತ್ತದೆ. ಇದರಿಂದ ಗಂಟಲಿನಲ್ಲಿ ತೀವ್ರ ಕೆರೆತ, ನೋವು ಉಂಟಾಗುತ್ತದೆ.

ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬಿಸಿಬಿಸಿ ಕಾಫಿ, ಟೀ ಅಥವಾ ಬಿಸಿ ಚಾಕಲೇಟ್ ಕುಡಿಯಲು ಬಯಸುತ್ತಾರೆ. ಆದರೆ ಅದರಲ್ಲಿರುವ ಕೊಬ್ಬು ಮತ್ತು ಕೆಫೀನ್ ಇರುತ್ತದೆ. ಈ ಪಾನೀಯಗಳು ನಮ್ಮ ದೇಹವನ್ನು ಒಣಗಿಸುತ್ತವೆ. ಅಲ್ಲದೆ ದೇಹದಲ್ಲಿ ಕಫ ಉತ್ಪತ್ತಿ ಮಾಡುತ್ತದೆ. ಹೀಗಾಗಿ ಕೆಫೀನ್ ನ್ನು ಬಿಟ್ಟು ನೀರು ಅಥವಾ ಗಿಡಮೂಲಿಕೆಗಳ ಪಾನೀಯವನ್ನು ಕುಡಿದರೆ ಒಳ್ಳೆಯದು.

ಮೊಟ್ಟೆ ಮತ್ತು ಮಾಂಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಗಳಿವೆ. ಹೆಚ್ಚು ಪ್ರೊಟೀನ್ ಗಳ ಸೇವನೆಯಿಂದ ಗಂಟಲಿನಲ್ಲಿ ಕಫ ಉತ್ಪತ್ತಿಯಾಗುತ್ತವೆ. ಸಂಸ್ಕರಿತ ಮಾಂಸಗಳು ಮತ್ತು ಅಧಿಕ ಕೊಬ್ಬಿನ ಮಾಂಸಗಳು ನಮ್ಮ ದೇಹಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮೀನು ಮತ್ತು ಕೋಳಿ ಮಾಂಸಗಳು ಇದಕ್ಕೆ ಹೋಲಿಸಿದರೆ ಸುರಕ್ಷಿತ. ಹೀಗಾಗಿ ಸಂಸ್ಕರಿತ ಮಾಂಸಗಳಿಗಿಂತ ಸಾವಯವ ಮಾಂಸ ಉತ್ತಮ

ಕುಂದಾಪ್ರ ಡಾಟ್ ಕಾಂ ಲೇಖನ

Exit mobile version