Site icon Kundapra.com ಕುಂದಾಪ್ರ ಡಾಟ್ ಕಾಂ

ಜಾಗತಿಕ ಬಂಟರ ಸಂಘ, ಬಂಟರ ಸಂಘಟನೆಯೋ ಅಥವಾ ರಾಜಕೀಯ ಪಕ್ಷವೋ?: ಕೆ. ಸನ್ಮತ್ ಹೆಗ್ಡೆ ಪ್ರಶ್ನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಾಗತಿಕ ಬಂಟರ ಸಂಘ ಬಹು ಹಿಂದಿನಿಂದಲೂ ಸಮಾಜದ ಕಟ್ಟಕಡೆಯಲ್ಲಿರುವ ಬಂಟರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಉತ್ತಮವಾದ ಹೆಸರನ್ನು ಗಳಿಸಿತ್ತು. ಆದರೆ ಇದೀಗ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವಿಧಾನಪರಿಷತ್ ಚುನಾವಣೆಗೆ ಬಂಟೇತರ ವ್ಯಕ್ತಿಯಾದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ರವರಿಗೆ ಬೆಂಬಲ ಘೋಷಿಸಿರುವುದು ಆಶ್ಚರ್ಯ ಹುಟ್ಟಿಸಿದೆ ಹಾಗೆ ಬೆಂಬಲ ಘೋಷಿಸಲು ಜಾಗತಿಕ ಬಂಟರ ಸಂಘ ರಾಜಕೀಯ ಪಕ್ಷವೇ? ಎಂದು ಬಂಟರ ಸಂಘದ ಸದಸ್ಯ ಸನ್ಮತ್ ಹೆಗ್ಡೆ ಪ್ರಶ್ನಿಸಿದ್ದಾರೆ.

ಬಂಟ ಸಮುದಾಯದಿಂದ ಇದೀಗ ಪ್ರತಾಪ್ ಚಂದ್ರ ಶೆಟ್ಟಿಯವರಂತಹ ಭ್ರಷ್ಟಾಚಾರ ರಹಿತ ನಾಯಕ ವಿಧಾನಪರಿಷತ್ ಅಭ್ಯರ್ಥಿಯಾಗಿರುವ ಸಂಧರ್ಭದಲ್ಲಿ ಜಾಗತಿಕ ಬಂಟರ ಸಂಘ ಅವರನ್ನು ಪುನಃ ಅವಿರೋಧವಾಗಿ ಆಯ್ಕೆ ಮಾಡುವಂತೆ ಎರಡೂ ರಾಜಕೀಯ ಪಕ್ಷಗಳಿಗೆ ಒತ್ತಾಯಿಸುವ ಬದಲಿಗೆ ಬಂಟರಲ್ಲದ ವ್ಯಕ್ತಿಗೆ ಬೆಂಬಲ ಘೋಷಿಸಿರುವುದರ ಹಿಂದಿನ ಮರ್ಮವೇನು ಎಂದವರು ಪ್ರಶ್ನಿಸಿದ್ದಾರೆ.

ಪ್ರತಾಪ್ ಚಂದ್ರ ಶೆಟ್ಟಿಯವರ ಹೊರತಾಗಿ ಬಂಟ ಜಾತಿಯಿಂದ ಮಂಜುನಾಥ ಭಂಡಾರಿ, ಯು.ಬಿ ಶೆಟ್ಟಿ, ರಮಾನಾಥ ರೈ, ಶ್ಯಾಮಲಾ ಭಂಡಾರಿ, ಶಶಿಧರ್ ಹೆಗ್ಡೆ ಯಂತಹ ಬಂಟ ನಾಯಕರುಗಳು ವಿಧಾನಪರಿಷತ್ ಗೆ ಆಕಾಂಕ್ಷಿಗಳಾಗಿದ್ದರೂ ಕೂಡ ಶಿಷ್ಟಾಚಾರಕ್ಕಾಗಿಯಾದರೂ ಯಾರ ಹೆಸರನ್ನೂ ಹೇಳದೆ ಮತ್ತೊಂದು ಸಮುದಾಯದ ವ್ಯಕ್ತಿಯನ್ನು ಜಾಗತಿಕ ಬಂಟರ ಸಂಘ ಬೆಂಬಲಿಸುವ ಕುರಿತಾದ ಹೇಳಿಕೆ ನೀಡಲು ಇವರುಗಳಿಗೆ ಅಧಿಕಾರ ನೀಡಿದವರಾದರೂ ಯಾರು? ಆದ ಕಾರಣ ಇನ್ನಾದರೂ ನಡೆದಿರುವ ತಪ್ಪನ್ನು ತಿದ್ದಿಕೊಂಡು ಬಂಟರ ಶ್ರೇಯೋಭಿವೃದ್ದಿಗಾಗಿ ಇರುವ ಬಂಟರ ಸಂಘದ ಹೆಸರನ್ನು ಕೆಡಿಸದೆ ತನ್ನ ಸಮುದಾಯದ ಅಭ್ಯರ್ಥಿಗೆ ಟಿಕೇಟು ನೀಡುವಂತೆ ಒತ್ತಾಯಿಸಲಿ ಎಂದವರು ಮನವಿ ಮಾಡಿದ್ದಾರೆ.

Exit mobile version