ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆಯಲ್ಲಿ ಸುಮಾರು 5.11 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಸ್ಥಳಕ್ಕೆ ಶನಿವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಭೇಟಿ ನೀಡಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಳಸದ, ಈ ಸ್ಥಳಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದು, ಇದನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 60-70ಲಕ್ಷ ರೂ. ಅನುದಾನ ಹೆಚ್ಚುವರಿಯಾಗಿ ಬೇಕಾಗಬಹುದು. ಮೊದಲು ಈ ಸ್ಥಳ ಉಪ್ಪುನೀರು ತುಂಬಿರುತ್ತಿದ್ದ ಪ್ರದೇಶವಾಗಿತ್ತು. ಅದನ್ನು ಈ ಮಟ್ಟಕ್ಕೆ ತರುವಲ್ಲಿ ಕಟ್ಟಡ ಕಾಮಗಾರಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಕಟ್ಟಡ ಕಾಮಗಾರಿ ಒಂದು ಹಂತಕ್ಕೆ ಬರಲಿದೆ. ಇಲಾಖೆಯಿಂದ ಅಥವಾ ಸರ್ಕಾರದಿಂದಾದರೂ ಅನುದಾನ ಪಡೆದು ಕಟ್ಟಡ ಪೂರ್ಣಗೊಳಿಸಲಾಗುವುದು. ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜತೆಗೆ ವಿಧಾನಸಭಾ ಅಧಿವೇಶವೂ ಆರಂಭಗೊಳ್ಳುತ್ತಿದ್ದು ಇದು ಮುಗಿದ ನಂತರ ಆದಷ್ಟು ಬೇಗ ಈ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕಳೆದ ಸೆಷ್ಪೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ನಮ್ಮದೇ ಆಗಿರುವ ಸಂಪನ್ಮೂಲ ಕ್ರೋಢಿಕರಿಸಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿಯ ಕೆಳ ಹಂತದಿಂದ ಮೇಲಿನ ಹಂತದ ನೌಕರರಿಗೂ ವೇತನದ ಶೇ.50ರಷ್ಟು ಪಾವತಿಸಲಾಗಿದೆ. ಇನ್ನುಳಿದ ಶೇ.50ನ್ನು ನೀಡಬೇಕಾಗಿದ್ದು, ನಾವು ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೇ ಈ ಬಗ್ಗೆ ಹಣಕಾಸಿನ ಸಚಿವಾಲಯದೊಂದಿಗೆ ಮಾತುಕತೆ ಕೂಡ ಮುಂದುವರಿದಿದ್ದು, ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಪಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ಈಗಲೂ ಕೂಡ ಶೇ.೭೫ರಷ್ಟು ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ದೂರ ದೂರದೂರಿಗೆ ಹೋಗುವ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ಒಂದೆಡೆ ಇಲಾಖೆಗೆ ಆದಾಯದಲ್ಲಿಯೂ ಕೊರತೆಯಾಗುತ್ತಿದೆ. ಇದು ನಮ್ಮ ಇಲಾಖೆಯ ಆಂತರಿಕ ಸಮಸ್ಯೆಯಾದರೂ ಸರ್ಕಾದ ಗಮನಕ್ಕೂ ತರಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸುಗಮವಾಗಿರಲಿದೆ ಎಂಬ ವಿಶ್ವಾಸವಿದೆ ಎಂದರು.
ವಿಶೇಷವಾಗಿ ಶಾಲಾ ಮಕ್ಕಳಿಗೆ ಸರ್ಕಾರಿ ಬಸ್‌ಗಳಿಂದ ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿರುವುದು ಕೆಲವು ಬಸ್‌ಗಳ ಚಾಲಕ, ನಿರ್ವಾಹಕರಿಂದ ಮಕ್ಕಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಬರುವ ದಿನಗಳಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಈ ರೀತಿಯ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ಇಲಾಖೆಯ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.