Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಬಿಲ್ಲವ ವಧು ವರಾನ್ವೇಷಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬಿಲ್ಲವ ಅಸೋಸಿಯೇಷನ್ ರಿ. ಬೆಂಗಳೂರು ಹಾಗೂ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘ, ಬೈಂದೂರು ಇವರ ಸಹಯೋಗದೊಂದಿಗೆ ಬಿಲ್ಲವ ವಧುವರರ ಮುಖಾಮುಖಿ ಕಾರ್ಯಕ್ರಮ ನಂದನವನ ದೇವಕಿ ಬಿ. ಆರ್. ಆಡಿಟೋರಿಯಂ (ಪರಿಚಯ) ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇವರು ನಡೆಸಿಕೊಂಡು ಬರುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ಈ ವಧುವರಾನ್ವೇಷಣೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ತಾಲ್ಲೂಕಿನ ಸಮಾಜದ ಎಲ್ಲಾ ವಧು ವರ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು. ಬೈಂದೂರು ತಾಲ್ಲೂಕು ಬಿಲ್ಲವ ಸಂಘಕ್ಕೆ ಸಮುದಾಯ ಭವನದ ಅಗತ್ಯವಿದ್ದು, ಇದರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅದ್ಯಕ್ಷ ಎಂ. ವೇದಕುಮಾರ ಮಾತನಾಡಿ , ಸಮಾಜದ ಒಗ್ಗಟ್ಟಿನ ಅಗತ್ಯತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು ರಾಜಕೀಯವಾಗಿ ನಾವು ನಮ್ಮ ಸಮಾಜದ ನಾಯಕರನ್ನು ಆಯ್ಕೆ ಮಾಡುವಲ್ಲಿ ಪಕ್ಷಭೇದ ಮರೆತು ಹೋರಾಡಬೇಕಾಗಿದೆ ಎಂದು ಕರೆ ನೀಡಿದರು. ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಬಡಮಕ್ಕಳ ವಿದ್ಯಾಭ್ಯಾಸದ ನಿಟ್ಟಿನಲ್ಲಿ ನೀಡುತ್ತಿರುವ ಸವಲತ್ತುಗಳು ಹಾಗೂ ಶೈಕ್ಷಣಿಕ ಸಹಾಯದ ಬಗ್ಗೆ ತಿಳಿಸಿದರು .ನಮ್ಮ ಸಮಾಜದ ಕಡುಬಡತನದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚಗಳನ್ನು ಸಂಘವೇ ಭರಿಸುವ ಬಗ್ಗೆ ತಿಳಿಸಿದರು.

ಬೈಂದೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್ ಎಲ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನವರು ಪ್ರತಿ ತಾಲ್ಲೂಕು ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿರುವ ವಧು ವರಾನ್ವೇಷಣೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಬೈಂದೂರಿನಲ್ಲಿ ಬಿಲ್ಲವ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಬೆಂಗಳೂರು ಬಿಲ್ಲವ ಅಸೋಸಿಯೇಶನ್ ವಧುವರ ಅನ್ವೇಷಣೆ ಸಮಿತಿಯ ಅಧ್ಯಕ್ಷೆ ಹರಿಣಿ ಎಸ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಬಂಧುಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೋರಿದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಬೆಂಗಳೂರು ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಹಿರಿಯ ಉಪಾಧ್ಯಕ್ಷರಾದ ಕೇಶವ ಪೂಜಾರಿ, ಉಪಾಧ್ಯಕ್ಷರಾದ ಬಿ ಎಂ ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪೂಜಾರಿ , ಸಂಘದ ಕೋಶಾಧಿಕಾರಿ ವಿ.ಗೋಪಾಲ, ಸಂಘಟನಾ ಕಾರ್ಯದರ್ಶಿ ಜೆ.ನಾರಾಯಣ ಪೂಜಾರಿ, ಸೇವಾದಳ ಅಧ್ಯಕ್ಷ ಶಿವಾನಂದ ಸಾಲಿಯನ್, ಮಹಿಳಾ ಘಟಕದ ಅಧ್ಯಕ್ಷೆ ಜಲಜಾ ಶೇಖರ್, ಬೈಂದೂರು ತಾಲ್ಲೂಕು ಬಿಲ್ಲವ ಘಟಕದ ಉಪಾಧ್ಯಕ್ಷರಾದ ಶೇಖರ್ ಪೂಜಾರಿ , ಶಂಕರ ಪೂಜಾರಿ, ಯುವ ಘಟಕದ ಅಧ್ಯಕ್ಷರಾದ ಶೇಖರ್ ಪೂಜಾರಿ ಉಪ್ಪುಂದ , ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ವಾಸುದೇವ ಪೂಜಾರಿ ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಹೆಚ್ಚು ವಧುವರ ಆಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್ ವಧುವರ ಸಮಿತಿಯ ಸದಸ್ಯೆ ಶರ್ಮಿಳಾ ಎಚ್ ವಂದಿಸಿದರು.

Exit mobile version