Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಹಲಸಂಗಿ ಗೆಳೆಯರು ಮತ್ತು ಕನ್ನಡ, ಜನಪದ ಸಾಹಿತ್ಯ ವಿಶೇಷ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿದ ಸಾಹಿತ್ಯವೇ ಜನಪದ ಸಾಹಿತ್ಯ. ಜನವಾಣಿ ಬೇರು ಕವಿವಾಣಿ ಹೂವು ಜಾನಪದ ಸಾಹಿತ್ಯ ಸಂಪಾದನೆಯ ಪ್ರಥಮ ಘಟ್ಟದಲ್ಲಿ ಹಲಸಂಗಿ ಗೆಳೆಯರು ಪ್ರಕಟಿಸಿದ ಗರತಿಯ ಹಾಡು, ಜೀವನ ಸಂಗೀತ ಹಾಗೂ ಮಲ್ಲಿಗೆ ದಂಡೆ ಸಂಕಲನಗಳ ಹಲವಾರು ಹಾಡುಗಳೊಂದಿಗೆ ಹಲಸಂಗಿ ಗೆಳೆಯರ ಬಳಗ ಜನಪದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕನ್ನಡ ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿ ಕನ್ನಡಿಗರಿಗೆ ಉಣ ಬಡಿಸಿದ ಶ್ರೇಯಸ್ಸು ಕೀರ್ತಿ ಹಲಸಂಗಿ ಗೆಳೆಯರ ಬಳಗಕ್ಕೆ ಸಲ್ಲಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಪಾದ ಶೆಟ್ಟಿ ಹೇಳಿದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಇವರ ಸಹಯೋಗದೊಂದಿಗೆ ಕನ್ನಡ ಸಂಘ, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಹಾಗೂ ಇವರ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಜರುಗಿದ ಹಲಸಂಗಿ ಗೆಳೆಯರು ಮತ್ತು ಜನಪದ ಸಾಹಿತ್ಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕ ಡಾ.ಎಸ್.ಕೆ ಕೊಪ್ಪಾ ಮಾತನಾಡಿ, ಆರ್ಥಿಕ ಶ್ರೀಮಂತಿಕೆಯ ಕೊರತೆಯ ನಡುವೆಯೂ ಸಾಹಿತ್ಯಿಕ ಸಾಂಸ್ಕೃತಿಕ ಶ್ರೀಮಂತಿಕೆಯ ಮೂಲಕ ಕರ್ನಾಟಕದಾದ್ಯಂತ ಚಿರಪರಿಚಿತರಾದ ಹಲಸಂಗಿ ಗೆಳೆಯರು ಮುಲ್ಕಿ ಪರೀಕ್ಷೆ ಗಿಂತ ಹೆಚ್ಚಿಗೆ ಓದಿದವರಲ್ಲ. ಆದರೂ ಬಹು ಭಾಷೆಯ ಮೇಲೆ ಪ್ರಭುತ್ವ ಹೊಂದಿ ಸಾಹಿತ್ಯ ಕೃಷಿ ಮಾಡಿದವರು ಎಂದು ಅಭಿಪ್ರಾಯಪಟ್ಟರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಗಣನಾಥ ಶೆಟ್ಟಿ ಎಕ್ಕಾರು ಕನ್ನಡ ಸಾಹಿತ್ಯಕ್ಕೆ ಹಲಸಂಗಿ ಗೆಳೆಯರ ಕೊಡುಗೆ ಕುರಿತು ಉಪನ್ಯಾಸ ನೀಡಿ, ನವೋದಯ ಕಾಲಘಟ್ಟ ನಿಜವಾಗಿ ಆರಂಭವಾದದ್ದೇ ಹಲಸಂಗಿ ಗೆಳೆಯರಿಂದ. ಹೊಸ ತತ್ವ, ಹೊಸಭಾಷ್ಯ, ಹೊಸ ಶಕ್ತಿಯಿಂದ ಹಲಸಂಗಿ ಗೆಳೆಯರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಲ್ಲಿ ತಾಳ್ಮೆ, ಸಹನೆ, ಸಹಿಷ್ಣುತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯದಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ನಮ್ಮ ಬೆಳವಣಿಗೆಗೆ ಕಾರಣಕರ್ತರಾದವರನ್ನು ಎಂದಿಗೂ ಮರೆಯದೆ ಸ್ಮರಿಸುವುದು ದೊಡ್ಡ ಗುಣ. ಆ ದೊಡ್ಡ ಗುಣವನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಅಭಿಮತವನ್ನು ವ್ಯಕ್ತಪಡಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಉಷಾದೇವಿ ಜೆ.ಎಸ್ ಸ್ವಾಗತಿಸಿದರು. ಉಪನ್ಯಾಸಕ ಪಂಜು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವರದರಾಜ್ ವಂದಿಸಿದರು.

ಬಹಳ ಮೊದಲು ಹಲಸಂಗಿ ಗೆಳೆಯರು ಕನ್ನಡದ ಕೆಲಸವನ್ನು ಮಾಡಿದ ಮಹಾನ್ ಚೇತನಗಳು. ಅವರನ್ನು ಕನ್ನಡದ ದಿಗ್ಗಜರುಗಳು ಎಂದರೆ ಅತಿಶಯೋಕ್ತಿಯಲ್ಲ. ಮಧುರಚೆನ್ನರು, ಸಿಂಪಿ ಲಿಂಗಣ್ಣ, ಪಿ.ದೂಲಾ ಇವರು ವಿಜಾಪುರದ ಇಂಡಿ ತಾಲೂಕಿನ ಸಾಮಾನ್ಯ ಹಳ್ಳಿಯಾದ ಹಲಸಂಗಿಯಲ್ಲಿ ಜನಿಸಿ ಸಾಹಿತ್ಯ ಸೃಷ್ಟಿ, ಜಾನಪದ ಹಾಡುಗಳ ಲಾವಣಿಗಳ ಸಂಗ್ರಹ, ನಾಡಹಬ್ಬದ ಆಚರಣೆ, ಅರವಿಂದ ಮತ್ತು ಶ್ರೀಮಾತಾ ಅವರ ಆಧ್ಯಾತ್ಮ ದರ್ಶನ, ರಾಮಕೃಷ್ಣ ಪರಮಹಂಸರ ಶತಮಾನೋತ್ಸವವನ್ನ ಆಚರಿಸುವ ಮೂಲಕ ಕನ್ನಡ ನಾಡಿಗೆ ಮಾದರಿಯಾದ ಈ ಪುಣ್ಯ ಪುರುಷರನ್ನು ನಾಡಿನಾದ್ಯಂತ ನೆನಪಿಸುವ ಕಾಯಕವನ್ನು ಹಲಸಂಗಿ ಗೆಳೆಯರ ಪ್ರತಿಷ್ಠಾನ ಮಾಡುವ ಮೂಲಕ ಅವರ ಆದರ್ಶ ಆಶಯಗಳನ್ನು ಮತ್ತೆ ನೆನಪು ಮಾಡುವ ಸದವಕಾಶವನ್ನು ಒದಗಿಸಿದೆ. ಇದೊಂದು ಸ್ತುತ್ಯಾರ್ಹವಾದ ಕಾಯಕ ಎಂದು ನಾನು ನಂಬಿದ್ದೇನೆ. – ಡಾ.ಶ್ರೀಪಾದ ಶೆಟ್ಟಿ. ಜನಪದ ಸಾಹಿತಿಗಳು ಮತ್ತು ನಿವೃತ್ತ ಪ್ರಾಧ್ಯಾಪಕರು.

Exit mobile version