Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಮಹೋತ್ಸವ: ಕುಂಭಾಶಿಯಲ್ಲಿ ಹಸಿರು ಹೊರೆಕಾಣಿಕೆ ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಉಡುಪಿ ಶ್ರೀ ಕೃಷ್ಣಮಠಕ್ಕೆ ತನ್ನದೇ ಆದ ಮಹತ್ವವಿದೆ. ಮಧ್ವಮತ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರ ಸನ್ನಿಧಾನವಿರುವ ಸರ್ವಜ್ಞ ಪೀಠ ಎಂಬುಂದು ಅತಿ ದೊಡ್ಡ ಶಕ್ತಿ ಪೀಠವಾಗಿದೆ. ಇತಂಹ ಪೀಠದಿಂದ ಪರ್ಯಾಯ ಮಹೋತ್ಸವವನ್ನು ಕೊಡುಗೆಯಾಗಿ ನೀಡಿದವರು ಮಧ್ವಾಚಾರ್ಯರು ಎಂದು ಬಸ್ರೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜನವರಿಯಲ್ಲಿ ನಡೆಯಲಿರುವ ಶ್ರೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರಿಗೆ ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸುವ ಬಗ್ಗೆ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಜರುಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅವರು ಶ್ರೀ ಮಧ್ವಾಚಾರ್ಯರು ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರದ ಮಹತ್ವವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ನಮ್ಮೆಲ್ಲ ಸಂಸ್ಕೃತಿ ಸಂಸ್ಕಾರ ಉಳಿದು ಬೆಳಗಬೇಕಾದರೆ ನಾವೆಲ್ಲರೂ ಒಂದಾಗಿ ಪರ್ಯಾಯ ಮಹೋತ್ಸವದ ಯಶಸ್ಸಿನ ಹೊಣೆಯನ್ನು ಹೊರಬೇಕಾಗಿದೆ. ಕುಂದಾಪುರ ಮತ್ತು ಬೈಂದೂರು ತಾಲೂಕಿನಿಂದ ೧೦೦ ಅಧಿಕ ಗ್ರಾಮಗಳಿಂದ ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರ ಪಡೆದು ಪರ್ಯಾಯ ಮಹೋತ್ಸವವನ್ನು ಯಶಸ್ಸಿಗೊಳಿಸೋಣಾ ಎಂದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ, ಉಡುಪಿ ಶ್ರೀ ಕೃಷ್ಣ ಮಠದಲ್ಲಿ 501ನೇ ದಿಕ್ಷೆಯನ್ನು ಕೃಷ್ಣಾಪುರ ಮಠಾಧೀಶರು ಸ್ವೀಕರಿಸುತ್ತಿದ್ದಾರೆ. ಪ್ರಸ್ತುತ 251ನೇ ಪರ್ಯಾಯ ಮಹೋತ್ಸವ ಇದಾಗಿದೆ. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಕೂಡ ಅನ್ನಬ್ರಹ್ಮನಿಗೆ ಸಲ್ಲಿಸುವ ವಿಶೇಷ ಪೂಜೆಯಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಹಸಿರು ಕಾಣಿಕೆ ಸರ್ಮಪಿಸುವ ಕೆಲಸಗಳಬೇಕು ಎಂದರು.

ಹಸಿರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮಗಳ ಮಾಹಿತಿ ನೀಡಿ, ಜ.12ರಂದು 300ಕ್ಕೂ ಅಧಿಕ ವಾಹನಗಳಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನಿಂದ ಹಸಿರು ಕಾಣಿಕೆ ಸಮರ್ಪಿಸಲಾಗುವುದು ಎಂದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಕುಂಭಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ರಾವ್, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ, ಹಿರಿಯ ಪತ್ರಕರ್ತ ಯು.ಎಸ್ ಶೆಣೈ, ಹಿರಿಯರಾದ ರಾಮಚಂದ್ರ ವರ್ಣ, ಹೆರಿಯಣ್ಣ ಚಾತ್ರಬೆಟ್ಟು ಬೀಜಾಡಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪುರಸಭಾ ಸದಸ್ಯರುಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು, ವಿವಿಧ ಸಂಘಟನೆಗಳ ಪ್ರಮುಖರು, ಉದ್ಯಮಿಗಳು ಮತ್ತಿತರರು ಉಪಸ್ಥಿತರಿದ್ದರು.

ಪರ್ಯಾಯ ಸಮಿತಿಯ ಅಧ್ಯಕ್ಷ ಕೆ.ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿದರು. ಹಸಿರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ವಿಶ್ವನಾಥ ಐತಾಳ್ ಗುಂಡ್ಮಿ ಕಾರ‍್ಯಕ್ರಮ ನಿರೂಪಿಸಿದರು. ರವಿರಾಜ್ ಉಪಾಧ್ಯಾಯ ವಂದಿಸಿದರು.

Exit mobile version