Kundapra.com ಕುಂದಾಪ್ರ ಡಾಟ್ ಕಾಂ

ಖಾರ್ವಿಕೇರಿ ಗಣೇಶೋತ್ಸವ ವರ್ಣರಂಜಿತ ಮೆರವಣಿಗೆಯೊಂದಿಗೆ ಸಂಪನ್ನ

ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ರಜತ ಮಹೋತ್ಸವು ಗಣೇಶನ ಜಲಸ್ಥಂಭನದ ಮೂಲಕ ತೆರೆಬಿದ್ದಿದೆ.

25ನೇ ವರ್ಷದ ಸಂಭ್ರಮದಲ್ಲಿರುವ ಗಣೇಶೋತ್ಸವ ಸಮಿತಿಯು ಖಾರ್ವಿಕೇರಿ ಶ್ರೀ ಮಹಾಕಾಳಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಿತ್ತು.

ಸೆ.18ರಂದು ಗಣೇಶನನ್ನು ಪೂಜಾ ಪೀಠದಲ್ಲಿ ಪ್ರತಿಷ್ಠಾಪಿಸುವುದರಿಂದ ಮೊದಲ್ಗೊಂಡು ಪ್ರತಿನಿತ್ಯ ಗಣಹೋಮ, ಮಹಾಪೂಜೆಗಳು ಪ್ರತಿನಿತ್ಯ ಜರುಗಿದರೇ, ಸೆ.೨೧ರಂದು ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿ ಆಶಿರ್ವದಿಸಿದರು.

ಸೆ.21ರ ಸಂಜೆ ನಡೆದ ವೈಭವಪೂರಿತ ಪುರಮೆರವಣಿಗೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ಖಾರ್ವಿಕೇರಿ ದೇವಳದಿಂದ ಆರಂಭಗೊಂಡು ಶಾಸ್ತ್ರೀವೃತ್ತವನ್ನು ಸುತ್ತುವರಿದ ಪಂಚಗಂಗಾವಳಿ ನದಿಯತ್ತ ಸಾಗಿದ ಬಣ್ಣ ಬಣ್ಣದ ವಿದ್ಯುದಲಾಂಕಾರಗಳಿಂದ ಕೂಡಿದ ಟ್ಯಾಬ್ಲೊಗಳು, ವಿವಿಧ ಸಂದೇಶ ಸಾರುವ ಟ್ಯಾಬ್ಲೋಗಳು ಸೇರಿದಂತೆ ೨೦ಕ್ಕೂ ಹೆಚ್ಚು ಟ್ಯಬ್ಲೋಗಳು ಆಕರ್ಷಕವಾಗಿದ್ದವು.

ವಿಸರ್ಜನಾ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ಪಂಚಗಂಗಾವಳಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಸದಸ್ಯರಿಂದ ಮೈನವಿರೇಳಿಸುವ ಬೆಂಕಿ ಆಟ ಜನರನ್ನು ರಂಜಿಸಿತು. ಬಳಿಕ ಗಣಪತಿಯ ವಿಗ್ರಹವನ್ನು ಕೋಟೆಬಾಗಿಲು ರಿಂಗರೋಡ್ ಬಳಿ ಪಂಚಗಂಗಾವಳಿ ನದಿಯಲ್ಲಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ಶ್ರೀ ಮಹಾಕಾಳಿ ಗಣೇಶೋತ್ಸವ ರಜತ ಮಹೋತ್ಸವದ ಅಧ್ಯಕ್ಷ ಸಂದೀಪ್ ಖಾರ್ವಿ, ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಅನುವಂಶೀಯ ಆಡಳಿತ ಮೊಕ್ತೆಸರರಾದ ಶಂಕರ ನಾಯ್ಕ್, ಪಾಂಡು ಸಾರಂಗ, ಖಾರ್ವಿ ಸಮುದಾಯದ ನೂರಾರು ಭಕ್ತಾರು ಪಾಲ್ಗೊಂಡಿದ್ದರು.

Exit mobile version