Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳಕ್ಕೆ ಕಾಶೀಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಕೆಲವು ವರ್ಷಗಳ ಹಿಂದಿನಿಂದಲೂ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆಯಬೇಕೆಂಬ ಆಶಯವಿತ್ತು ಆದರೆ ಸಮಯಾಭಾವದಿಂದ ಕ್ಷೇತ್ರಕ್ಕೆ ರಲು ಸಾಧ್ಯವಾಗಿಲ್ಲ. ಪ್ರಸ್ತುತ ಬೈಂದೂರಿನ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಇವರ ಕೋರಿಕೆ ಮೇರೆಗೆ ಈಗ ಸಕಾಲ ಕೂಡಿ ಬಂದಿದ್ದು, ತಾಯಿಯ ದರ್ಶನಕ್ಕೆ ಅವಕಾಶ ಸಿಕ್ಕಿದೆ ಎಂದು ಕಾಶೀಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೊಲ್ಲೂರು ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಇಲ್ಲಿನ ಶ್ರೀ ಸರಸ್ವತಿ ಮಂಟಪದಲ್ಲಿ ಆಶೀರ್ವಚನ ಮಂತ್ರಾಕ್ಷತೆ ನೀಡಿದರು. ಮಹಾಮಾರಿ ಕೊರೊನಾದಿಂದ ವಿಶ್ವವೇ ತಲ್ಲಣಗೊಂಡಿದ್ದು, ಜನರನ್ನು ಈ ಆತಂಕದಿಂದ ದೂರ ಮಾಡುವಂತೆ ಹಾಗೂ ದೇಶದಲ್ಲಿ ರೋಗದ ಭೀಕರತೆ ಮುಕ್ತಗೊಂಡು ಸುಖ-ಶಾಂತಿ ನೆಲೆಸುವ ಮೂಲಕ ಸುಭದ್ರವಾಗಿರಲಿ ಎಂದು ಜಗನ್ಮಾತೆಯಲ್ಲಿ ಪ್ರಾರ್ಥಿಸಿದ್ದೇವೆ. ನಿಸ್ವಾರ್ಥ ಸೇವೆಯಿಂದ ದೇವರು ಹತ್ತಿರನಾಗುತ್ತಾನೆ. ಹಾಗೆಯೇ ಭಕ್ತರ ಬೇಡಿಕೆಗಳನ್ನು ತಾಯಿ ಈಡೇರಿಸುತ್ತಾಳೆ ಎಂಬ ನಂಬಿಕೆ ನಮ್ಮದು ಎಂದರು.

ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ಹಾಗೂ ಕೆ. ನರಸಿಂಹ ಭಟ್ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್. ಪಿ. ಬಿ. ಮಹೇಶ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲ್‌ಕುಮರ್ ಶೆಟ್ಟಿ, ಸಂಧ್ಯಾ ರಮೇಶ್ ದೇವಳದ ವತಿಯಿಂದ ಗೌರವಿಸಿದರು. ಹೊರ ಪ್ರಾಂಗಣದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದ ಸ್ವಾಮೀಜಿ ಚಿನ್ನದ ರಥವನ್ನು ವೀಕ್ಷಿಸಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಗ್ರಾಪಂ ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ಶ್ರೀಕೃಷ್ಣಾ ಪೈಪ್‌ನ ಮಾಲಕ ಎನ್. ಭಾಸ್ಕರ್ ನಾಯಕ್, ಉದ್ಯಮಿಗಳಾದ ಗೋಪಾಲಕೃಷ್ಣ ಕಾಮತ್ ಸಿದ್ದಾಪುರ, ಶಿರಾಲಿ ಶ್ರೀ ಮಹಾಮಾಯಿ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಗೋಪಿನಾಥ್ ಕಾಮತ್, ಎನ್. ನಾರಾಯಣ ನಾಯಕ್, ವೆಂಕಟೇಶ ಭಟ್ ಉಡುಪಿ, ಶಶಿಕಾಂತ್ ಶ್ಯಾನುಭಾಗ್ ಹಾಗೂ ಕೊಲ್ಲೂರು ವಲಯದ ಜಿಎಸ್‌ಬಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಇದ್ದರು.

Exit mobile version